
ಭದ್ರಾವತಿ: ಯೇಸುವಿನ ಜನನದ ವೃತ್ತಾಂತವೇ ಜಗತ್ತಿಗೆ ಹಲವು ಸಂದೇಶ ಸಾರುತ್ತದೆ ಎಂದು ಪಾಸ್ಟರ್ ರೇಮಂಡ್ ಹೇಳಿದರು .
ಭಾನುವಾರ ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಬಡವರ ಕ್ರಿಸ್‌ಮಸ್ ಆಚರಣೆ ಕಾರ್ಯಕ್ರಮದಲ್ಲಿ ಕ್ರಿಸ್‌ಮಸ್ ಸಂದೇಶ ನೀಡಿದರು .
ಜಗತ್ತಿಗೆ ಏಸು ಕ್ರಿಸ್ತನ ಸಂದೇಶಗಳನ್ನು ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಕರುಣೆ, ಮಮತೆ, ವಾತ್ಸಲ್ಯದೊಂದಿಗೆ ನಿಸ್ವಾರ್ಥ ಸೇವೆಯಲ್ಲಿ ತೊಡಗಬೇಕು. ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ದಯಾಸಾಗರ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು, ನಿರಂತರವಾಗಿ ಸೇವೆಯಲ್ಲಿ ಮುಂದುವರೆಯುವ ಕೃಪೆ ಏಸು ಕ್ರಿಸ್ತ ಕರುಣಿಸಲಿ ಎಂದು ಪ್ರಾರ್ಥಿಸಿದರು .
ಮಾಜಿ ಸೈನಿಕರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ವೆಂಕಟಗಿರಿ, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮಾತನಾಡಿ, ದಯಾಸಾಗರ್ ಟ್ರಸ್ಟ್ ಹಲವಾರು ವರ್ಷಗಳಿಂದ ನಿರ್ಗತಿಕರು, ದೀನದಲಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ. ಟ್ರಸ್ಟ್ ಸಂಸ್ಥಾಪಕರಾದ ದಿವಂಗತ ರೋಸಯ್ಯರವರು ತಮ್ಮ ಬದುಕನ್ನು ನಿರ್ಗತಿಕರು, ದೀನದಲಿತರ ಸೇವೆಗಾಗಿ ಸಮರ್ಪಿಸಿಕೊಂಡಿದ್ದರು. ಅವರ ದಾರಿಯಲ್ಲಿ ಅವರ ಪುತ್ರ ಆರ್. ಮೋಸಸ್ ಹಾಗು ಸ್ನೇಹಿತರು ಸಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ದಯಾಸಾಗರ್ ಟ್ರಸ್ಟ್ ಅಧ್ಯಕ್ಷ ಆರ್. ಮೋಸಸ್, ಕಾರ್ಯದರ್ಶಿ ಬಿ. ಪ್ರಸಾದ್, ರೆವರೆಂಡ್ ಪಾಸ್ಟರ್‌ಗಳಾದ ಗಿಡಿಯೋನ್, ಅಬ್ರಹಾಂ ಗುಂಡಿ, ಜಯರಾಮ್, ಧನರಾಜ್, ಯೂತ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ನಗರಸಭೆ ಸದಸ್ಯ ಐ.ವಿ ಸಂತೋಷ್ ಕುಮಾರ್, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಮಂಡಳಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಜೆ ಪ್ರಭು, ತೆಲುಗು ಕ್ರಿಶ್ಚಿಯನ್ ಅಸೋಯೇಷನ್ ಅಧ್ಯಕ್ಷ ಭಾಸ್ಕರ್ ಬಾಬು, ವೈಎಂಸಿಎ ಸಾಮುಯಲ್, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.