ADVERTISEMENT

ಭದ್ರಾವತಿ | ಈದ್‌ಮಿಲಾದ್ ಮೆರವಣಿಗೆ ವೇಳೆ ಪಾಕ್ ಪರ ಘೋಷಣೆ; ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 23:30 IST
Last Updated 9 ಸೆಪ್ಟೆಂಬರ್ 2025, 23:30 IST
<div class="paragraphs"><p>ಎಫ್‌ಐಆರ್‌</p></div>

ಎಫ್‌ಐಆರ್‌

   

ಶಿವಮೊಗ್ಗ: ಭದ್ರಾವತಿಯಲ್ಲಿ ಸೋಮವಾರ ರಾತ್ರಿ ನಡೆದಿದ್ದ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಭದ್ರಾವತಿಯ ಅಂಬೇಡ್ಕರ್‌ ವೃತ್ತದಲ್ಲಿ ಮೆರವಣಿಗೆ ಸಾಗುವಾಗ ಗದ್ದಲದ ನಡುವೆ ಕೆಲವು ಯುವಕರಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಬರುತ್ತದೆ.

ADVERTISEMENT

ಮೂರು ತಂಡಗಳ ರಚನೆ:

‘ಈ ಕುರಿತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದೇವೆ. ವಿಡಿಯೊ ಎಲ್ಲಿ, ಯಾವಾಗ ಚಿತ್ರೀಕರಣ ಆಗಿದೆ. ಅದರ ಸತ್ಯಾಸತ್ಯತೆ ಪರಿಶೀಲಿಸಲು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗುವುದು.  ತನಿಖೆಗೆ ಮೂರು ತಂಡಗಳ ರಚನೆ ಮಾಡಿದ್ದೇವೆ' ಎಂದು ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್ ಮಂಗಳವಾರ ತಿಳಿಸಿದರು.

‘ಮುಸ್ಲಿಮ್ ಆಗಿ ಹುಟ್ಟುವ ಆಸೆಯಿದೆ’

ಈದ್ ಮಿಲಾದ್ ಅಂಗವಾಗಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್‌ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ, ‘ಮುಸ್ಲಿಮ್ ಜನಾಂಗದ ಪ್ರೀತಿಗೆ ಪಾತ್ರವಾಗಿರುವ ನನಗೆ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವ ಅಸೆ ಇದೆ’ ಎಂದು ಹೇಳಿರುವ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

20 ವರ್ಷದ ಹಿಂದೆ ಈದ್‌ ಮಿಲಾದ್ ಮೆರವಣಿಗೆ ರದ್ದಾಗಿತ್ತು. ಧರ್ಮಸಿಂಗ್‌ ನೇತೃತ್ವದ ಸರ್ಕಾರ ಮತ್ತೆ ಪ್ರಾರಂಭಿಸಿತು. ಅಂದಿನಿಂದ ಶಾಂತಿಯುತವಾಗಿ ಮೆರವಣಿಗೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿ.ಕೆ.ಸಂಗಮೇಶ್ವರ, ‘ಈಶ್ವರ ಅಲ್ಲ ತೇರಾ ನಾಮ್ ಎಂಬ ಆಶಯದಿಂದ ನಾನು ಆಡಿದ ಮಾತಿಗೆ ಬಿಜೆಪಿ– ಜೆಡಿಎಸ್‌ನವರು ರಾಜಕೀಯ ಬಣ್ಣ ನೀಡುತ್ತಿದ್ದಾರೆ’ ಎಂದರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರದಲ್ಲಿ ವಿಡಿಯೊ ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌ಪಿಗೆ ಹೇಳಿದ್ದೇನೆ. ನಾನೇ ದೂರು ಕೊಡಿಸಿದ್ದೇನೆ.
ಬಿ.ಕೆ.ಸಂಗಮೇಶ್ವರ, ಭದ್ರಾವತಿ ಶಾಸಕ
ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದು ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯಕ್ಕೆ ಮತ್ತೊಂದು ಕನ್ನಡಿ.
ಬಿ.ವೈ.ರಾಘವೇಂದ್ರ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.