ಭದ್ರಾವತಿ: ನಗರದ ಮಧ್ಯ ಭಾಗದಲ್ಲಿ ಭದ್ರಾ ನದಿಗೆ ಅಡ್ಡಲಾಗಿ 1870ರಲ್ಲಿ ನಿರ್ಮಿಸಿರುವ ಸೇತುವೆ ಈಗ ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ವರ್ಷಕ್ಕೊಮ್ಮೆ ಸೇತುವೆಯ ಮೇಲ್ಭಾಗದಲ್ಲಿ ಸುಣ್ಣ ಬಳಿದು ರಸ್ತೆಗೆ ಅಲ್ಲಲ್ಲಿ ತೇಪೆ ಹಚ್ಚುವುದು ಬಿಟ್ಟರೆ ಬೇರೆ ಯಾವುದೇ ದುರಸ್ತಿ ಕಾರ್ಯವೂ ಕಂಡು ಬರುತ್ತಿಲ್ಲ. ಸೇತುವೆಯ ಇಕ್ಕೆಲಗಳಲ್ಲಿ ಈಗಾಗಲೇ ಅರಳಿ ಗಿಡ ಸೇರಿ ಗಿಡ-ಗಂಟೆ ಬೆಳೆಯುತ್ತಿವೆ. ಸೇತುವೆ ಕೆಳಭಾಗದ ಕಟ್ಟಡದ ಕೆಲವು ಭಾಗಗಳಲ್ಲಿ ಸಿಮೆಂಟ್ ಪ್ಲಾಸ್ಟರಿಂಗ್ ಬಿಚ್ಚಿಕೊಂಡಿವೆ.
ಸೇತುವೆ ಮೇಲ್ಭಾಗದ ರಸ್ತೆಯಲ್ಲಿ ನಿತ್ಯ ಓಡಾಡುವ ಅಧಿಕಾರಿಗಳು ಸೇತುವೆಯ ಕೆಳಭಾಗದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ ಅದರ ನಿರ್ವಹಣೆಗೆ ಗಮನ ಹರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಬ್ರಿಟಿಷ್ ಆಡಳಿತದ ಅವಧಿಯಲ್ಲಿ ₹ 74,992 ವೆಚ್ಚದಲ್ಲಿ ಗಟ್ಟಿ-ಮುಟ್ಟಾದ 14 ಕಮಾನುಗಳ ಸೇತುವೆ ನಿರ್ಮಾಣ ಮಾಡಿ 155 ವರ್ಷ ಕಳೆದಿವೆ. ಇಷ್ಟು ವರ್ಷಗಳಾದರೂ ಸೇತುವೆ ಸದೃಢವಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ.
ವಾಹನ ದಟ್ಟಣೆ ತಡೆಗಟ್ಟಲು ಮತ್ತು ಹಳೆ ಸೇತುವೆಯ ಮೇಲಿನ ಒತ್ತಡ ಕಡಿಮೆ ಮಾಡಲು ಇನ್ನೊಂದು ಸೇತುವೆಯನ್ನು ಈಚೆಗಷ್ಟೇ ನಿರ್ಮಿಸಲಾಗಿದೆ. ಎರಡೂ ಸೇತುವೆಗಳಲ್ಲಿ ಏಕಮುಖ ಸಂಚಾರ ಇರುವುದರಿಂದ ಜನರು ಎರಡೂ ಸೇತುವೆಗಳನ್ನು ಬಳಸುತ್ತಿದ್ದಾರೆ. ಆದರೆ, ಹೊಸ ಸೇತುವೆಯ ಎರಡು ಬದಿಗಳು ಅವೈಜ್ಞಾನಿಕವಾಗಿ ರಸ್ತೆಯನ್ನು ಕೂಡುವುದರಿಂದ ವಾಹನ ಸವಾರರು ಗೊಂದಲಕ್ಕೀಡಾಗಿ ಹಳೆಯ ಸೇತುವೆಯ ಮೇಲೆಯೇ ಹೆಚ್ಚಾಗಿ ಸಂಚರಿಸುತ್ತಾರೆ.
‘ನದಿಯ ದಡದಲ್ಲಿ ಒತ್ತುವರಿ, ಕಸ ವಿಲೇವಾರಿ ಕಾರ್ಯ ತಡೆಗಟ್ಟಬೇಕಿದೆ. ಇದರಿಂದ ಸೇತುವೆಯ ಬದಿಗಳಲ್ಲಿ ನೀರು ನಿಲ್ಲದೆ ಸರಾಗವಾಗಿ ಹರಿದು, ಸೇತುವೆಗೆ ಹಾನಿಯಾಗುವುದನ್ನು ತಡೆಗಟ್ಟಬಹುದು’ ಎಂದು ವ್ಯಾಪಾರಿ ದಿನೇಶ್ ತಿಳಿಸಿದರು.
‘ಹಳೆ ಸೇತುವೆಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಅಲ್ಲಿ ದ್ವಿಚಕ್ರ ವಾಹನ ಚಲಾಯಿಸಲು ಭಯವಾಗುತ್ತದೆ’ ಎಂದು ಶಿಕ್ಷಕಿ ಶೀಲಾ ತಿಳಿಸಿದರು.
ಹಳೆಯ ಸೇತುವೆಯ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಸೇತುವೆಯ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗುವುದುಎಸ್.ಶ್ರೀನಿವಾಸ್ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.