
ಶಿವಮೊಗ್ಗ: ‘ಭಗವದ್ಗೀತೆ ಗ್ರಂಥ ಮಹಾತ್ಮ ಗಾಂಧೀಜಿ ಅವರಿಗೂ ಪ್ರಿಯವಾಗಿತ್ತು. ಗೀತೆಯನ್ನು ಯಾರು ಬೇಕಾದರೂ ಓದಬಹುದು. ಪ್ರತಿಯೊಂದರಲ್ಲೂ ಶ್ರೇಷ್ಠತೆ ಬರಲು ಭಗವದ್ಗೀತೆ ಪ್ರೇರಕ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಹೇಳಿದರು.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಮನುಷ್ಯನ ಮೋಹ, ಮದ, ಮತ್ಸರಗಳನ್ನು ಹೋಗಲಾಡಿಸಲು ಭಗವದ್ಗೀತೆ ಸಹಕಾರಿ’ ಎಂದು ಅಭಿಪ್ರಾಯಪಟ್ಟರು.
‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅರವಿಂದ ಘೋಷ್, ಸ್ವಾಮಿ ವಿವೇಕಾನಂದ, ಸುಭಾಶ್ಚಂದ್ರ ಬೋಸ್, ಮಹಾತ್ಮ ಗಾಂಧೀಜಿ ಮೇಲೆ ಭಗವದ್ಗೀತೆ ಪ್ರಭಾವ ಬೀರಿದ್ದು, ಅವರಿಗೆ ಆತ್ಮ ಶಕ್ತಿಯನ್ನು ನೀಡಿತ್ತು. ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್ ಕೂಡ ಭಗವದ್ಗೀತೆಯಿಂದ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಜೀವನ ಪಥವನ್ನು ದರ್ಶನ ಮಾಡಿಸುವುದೇ ಭಗವದ್ಗೀತೆ’ ಎಂದು ಹೇಳಿದರು.
‘ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಧ್ಯಾನಯೋಗದ ಮೂಲಕ ಮನುಷ್ಯನ ಜೀವನಕ್ಕೆ ಉತ್ತಮ ಗ್ರಾಸ ಒದಗಿಸುವ ಶ್ರೇಷ್ಠ ಗ್ರಂಥ ಭಗವದ್ಗೀತೆ. ಸುಖ– ದುಃಖ, ಜಯ– ಅಪಜಯಗಳನ್ನು ಸಮಚಿತ್ತತೆಯಿಂದ ನೋಡುವುದೇ ಭಗವದ್ಗೀತೆಯ ಸಾರ. ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದೇವೆಯೇ ಎಂಬ ಪ್ರಶ್ನೆಗಳಿಗೆಲ್ಲಾ ಭಗವದ್ಗೀತೆ ಉತ್ತರ ಕೊಡುತ್ತದೆ’ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ‘ಕಳೆದ 18 ವರ್ಷಗಳಿಂದ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಜರುಗುತ್ತಿರುವ ಈ ವಿಚಾರ ಸಂಕಿರಣ ಐತಿಹಾಸಿಕ ಕಾರ್ಯಕ್ರಮ’ ಎಂದು ಬಣ್ಣಿಸಿದರು.
ಭಗವದ್ಗೀತೆ ಮತ್ತು ಅಪರಾಧಗಳ ನಡುವೆ ಒಂದು ಸಂಬಂಧವಿದೆ. ಅಪರಾಧ ಮೂಲಕ್ಕೆ ಹೋಗಿ ಚಿವುಟಿ ಹಾಕುತ್ತಾ ಸಮಾಜವನ್ನು ಸುಸ್ಥಿತಿಗೆ ತರುವುದೇ ಭಗವದ್ಗೀತೆಯ ಸಾರ. ಮನಃಶಾಸ್ತ್ರ, ಕಾನೂನು ಮತ್ತು ಅಪರಾಧ ಶಾಸ್ತ್ರಗಳ ಚಿಂತನೆ, ಚರ್ಚೆ ವಿಶ್ವವಿದ್ಯಾಲಯಗಳಲ್ಲಿ ಆಗಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಕುಲಸಚಿವ ಪ್ರೊ.ಎ.ಎಲ್.ಮಂಜುನಾಥ್, ವಿವಿ ಹಣಕಾಸು ಅಧಿಕಾರಿ ಪ್ರೊ.ರಮೇಶ್, ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್, ಸಮಿತಿಯ ಬಾಲಕೃಷ್ಣ ಹೆಗಡೆ, ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಗಜಾನನ ಪ್ರಭು ಇದ್ದರು.
ಸ್ವರ್ಣವಲ್ಲಿ ಸ್ವಾಮೀಜಿ ಬೇರೆ ಬೇರೆ ವಿಚಾರಗಳೊಂದಿಗೆ ಮತ್ತೆ ಬಂದರೆ ಅದನ್ನು ಖಂಡಿತವಾಗಿ ಸ್ವೀಕರಿಸುತ್ತೇನೆ. ಹಾಗೆಯೇ ಹೋರಾಟವನ್ನು ಸ್ವಾಗತಿಸುತ್ತೇನೆ. ಟೀಕೆ ಭಿನ್ನಾಭಿಪ್ರಾಯಗಳಿಗೆ ತೆರೆದುಕೊಳ್ಳೋಣ. ಯಾವುದೋ ಲೇಬಲ್ ಕಟ್ಟಿ ಹಾಳು ಮಾಡುವುದು ಬೇಡಪ್ರೊ.ಶರತ್ ಅನಂತಮೂರ್ತಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ
ಶರತ್ ಅನಂತಮೂರ್ತಿ ಅವರ ಕಾಲದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಖಂಡನಾರ್ಹ. ಕುವೆಂಪು ಅವರ ಚಿಂತನೆಗಳನ್ನು ಕುಲಪತಿ ನೆನಪು ಮಾಡಿಕೊಳ್ಳಲಿಲಕ್ಷ್ಮಣ ಕೊಡಸೆ, ಹಿರಿಯ ಪತ್ರಕರ್ತ
ಭಿನ್ನ ಅಭಿಪ್ರಾಯ ಗೌರವಿಸೋಣ: ಕುಲಪತಿ ಕಿವಿಮಾತು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ‘ಇಲ್ಲಿ ಪ್ರಶ್ನೋತ್ತರಕ್ಕೆ ಅವಕಾಶ ಇದ್ದರೆ ದಲಿತ ಮಿತ್ರರಿಗೆ ಇಲ್ಲಿ ಬಂದು ಭಾಗವಹಿಸಿ ಚರ್ಚೆ ಮಾಡೋಣ ಎಂದು ಹೇಳುತ್ತಿದ್ದೆ. ಆದರೆ ಅವಕಾಶವಿಲ್ಲ. ಹೀಗಾಗಿ ಇನ್ನೊಂದು ದಿನ ಅವಕಾಶ ಮಾಡಿಕೊಡೋಣ. ಇಂತಹ ಚರ್ಚೆ ನಡೆಯದಿದ್ದರೆ ನಮ್ಮ ಮಕ್ಕಳ ಬುದ್ಧಿ ಬೆಳವಣಿಗೆ ಆಗುವುದಿಲ್ಲ. ಇಂದಿನ ಮಕ್ಕಳು ಆಧುನಿಕರು. ಅವರಿಗೆ ಸ್ವತಂತ್ರವಾಗಿ ಚಿಂತನೆ ಮಾಡುವ ಶಕ್ತಿ ಇದೆ’ ಎಂದು ಅಭಿಪ್ರಾಯಪಟ್ಟರು. ‘ಕಾರ್ಯಕ್ರಮ ಮಾಡಬೇಡಿ ಎಂದು ಹೇಳಲು ಹೊರಟವರಿಗೆ ದಿಟ್ಟತನ ಇಲ್ಲ. ನಂಬಿಕೆಯಲ್ಲಿ ಶ್ರದ್ಧೆ ಇದ್ದು ದಿಟ್ಟತನ ಇದ್ದರೆ ಒಳ್ಳೆಯ ಆಲೋಚನೆ ಇಟ್ಟುಕೊಂಡು ಗೌರವದಿಂದ ವಿರೋಧ ಮಾಡಿದರೆ ತಪ್ಪಿಲ್ಲ. ಇಲ್ಲದಿದ್ದರೆ ಇದು ತುಂಬಾ ಅಪಾಯಕಾರಿ. ಬರೀ ಒಂದನ್ನೇ ಹೇಳುತ್ತಾ ಹೇಳುತ್ತ ಹೋದಾಗ ಜನರಲ್ಲಿ ಸುಸ್ತು ಉಂಟಾಗುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು. ‘ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹೆಚ್ಚು ಮಾತನಾಡುವವರಿಗಿಂತ ನಾನೇ ಅವರನ್ನು ಹೆಚ್ಚು ಓದಿಕೊಂಡಿದ್ದೇನೆ. ಎಲ್ಲವನ್ನೂ ಲೇಬಲ್ ಮಾಡಿಕೊಳ್ಳಬಾರದು. ಜಾತ್ಯತೀತ ಭಾರತಕ್ಕೆ ಕಾಲಿಡಬೇಕಾದರೆ ಅಂಬೇಡ್ಕರ್ ಅನಿವಾರ್ಯ. ಆದರೆ ಅವರಿಗೂ ಭಗವದ್ಗೀತೆ ಬಗ್ಗೆ ಕೆಲವು ಗೊಂದಲಗಳಿದ್ದವು. ಅದನ್ನೂ ಇಲ್ಲಿ ಚರ್ಚೆಗೆ ಇಡೋಣ. ಸೆನ್ಸಾರ್ ಶಿಪ್ ಬೇಡ’ ಎಂದರು. ‘ಭಾರತೀಯ ಸಮಾಜದಲ್ಲಿ ಎಲ್ಲರೂ ಒಂದೇ. ಅದಕ್ಕೆ ಇದು ಶ್ರೇಷ್ಠ ನಾಗರಿಕತೆ. ಆದರೆ ಇಂದು ಭಿನ್ನ ಭಿನ್ನ ಆಲೋಚನೆಗಳಲ್ಲಿ ಧ್ರುವೀಕರಣಗೊಂಡು ಒಬ್ಬರ ಅಭಿಪ್ರಾಯ ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹೋಗದ ಸ್ಥಿತಿಗೆ ಬಂದಿದ್ದೇವೆ. ರಾಜಕೀಯದವರು ಇದನ್ನೆಲ್ಲ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದರು.
ವಿಚಾರ ಸಂಕಿರಣಕ್ಕೆ ವಿರೋಧ: ಕುಲಪತಿಗೆ ಪತ್ರ
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ವಿಚಾರ ಸಂಕಿರಣಕ್ಕೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್ ಅವರು ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವವರು ಇದೀಗ ಭಗವದ್ಗೀತೆಯ ಹೆಸರಲ್ಲಿ ಕುವೆಂಪು ವಿವಿಗೆ ಬಂದಿದ್ದಾರೆ. ಇವರೆಲ್ಲರೂ ಗಾಂಧಿ ಬುದ್ದ ಬಸವಣ್ಣ ಅಂಬೇಡ್ಕರ್ ನಿಲುವುಗಳನ್ನು ವಿರೋಧಿಸುವ ಸಂಸ್ಥೆಯಲ್ಲಿ ಸಕ್ರಿಯವಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ದೇಶದ ವಿಶ್ವವಿದ್ಯಾಲಯಗಳನ್ನು ಒಂದೇ ಸಿದ್ದಾಂತದ ಅಡಿಯಲ್ಲಿ ತಂದು ವಿದ್ಯಾರ್ಥಿಗಳಿಗೆ ಸಂವಿಧಾನಕ್ಕಿಂತ ಹೆಚ್ಚಾಗಿ ಮನುಸ್ಮೃತಿಯನ್ನು ತಲೆಗೆ ತುಂಬಬೇಕು ಎಂಬ ಸಂಘಪರಿವಾರದ ತೀರ್ಮಾನದಂತೆ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಉಲ್ಲೇಖಿಸಿರುವ ಅವರು ವಿವಿಯ ನಿರ್ಧಾರದ ವಿರುದ್ಧ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೂ ಪತ್ರ ಬರೆದಿದ್ದಾರೆ. ವಿಚಾರ ಸಂಕಿರಣದ ಔಚಿತ್ಯವೇನು? ಲೇಖಕ ಹರ್ಷಕುಮಾರ್ ಕುಗ್ವೆ ಕೂಡ ಕುಲಪತಿಗೆ ಬಹಿರಂಗಪತ್ರ ಬರೆದಿದ್ದು ‘ಡಾ.ಬಿ.ಆರ್.ಅಂಬೇಡ್ಕರ್ ದೇಶದಲ್ಲಿ ಮನುಷ್ಯರೆಲ್ಲರಿಗೂ ಅತ್ಯಗತ್ಯ ಮೂಲ ತತ್ವಗಳ ನೆಲೆಯಲ್ಲಿ ಭಗವದ್ಗೀತೆ ಮನುಸ್ಮೃತಿಯಂತಹ ಪಠ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಹೀಗಾಗಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆ ಮನುಸ್ಮೃತಿ ವೇದ ಸಾಹಿತ್ಯ ಪ್ರಾಚೀನ ಜ್ಞಾನ ಪರಂಪರೆ ಇತ್ಯಾದಿಗಳನ್ನು ಚರ್ಚಿಸಬೇಕೇ? ದೇಶವನ್ನು ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಹೇಗೆ ಒಡೆಯಬೇಕು ಎಂದು ನೀಲನಕ್ಷೆ ಇಟ್ಟುಕೊಂಡಿರುವ ಸಿದ್ಧಾಂತಗಳ ಜನರ ಮೂಲಕ ಇಂತಹ ಕಾರ್ಯಕ್ರಮ ಆಯೋಜಿಸಬೇಕೆ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.