ADVERTISEMENT

ಮಹಾ ಶಿವರಾತ್ರಿ: ಶಿವಶಕ್ತಿ, ಆದಿಶಕ್ತಿಯ ಸಂಗಮ ಕ್ಷೇತ್ರ ‘ಭೀಮೇಶ್ವರ’

ಐದು ದಿನಗಳ ಮಹಾ ಶಿವರಾತ್ರಿ ಜಾಗರಣೋತ್ಸವ ಆಚರಣೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 4:49 IST
Last Updated 14 ಫೆಬ್ರುವರಿ 2026, 4:49 IST
25ಕೆಆರ ಜಿ2ಇಪಿ : ಕಾರ್ಗಲ್ ಸಮೀಪದಲ್ಲಿರುವ ಭೀಮೇಶ್ವರದಲ್ಲಿ ಮಧ್ಯಮ ಪಾಂಡವ ಭೀಮನಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶಿವಲಿಂಗ ಮಂದಿರ
25ಕೆಆರ ಜಿ2ಇಪಿ : ಕಾರ್ಗಲ್ ಸಮೀಪದಲ್ಲಿರುವ ಭೀಮೇಶ್ವರದಲ್ಲಿ ಮಧ್ಯಮ ಪಾಂಡವ ಭೀಮನಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶಿವಲಿಂಗ ಮಂದಿರ   

ವಿ.ಸಂತೋಷ್ ಕುಮಾರ್ ಕಾರ್ಗಲ್

ಕಾರ್ಗಲ್: ಸಾಗರ ತಾಲ್ಲೂಕಿನಲ್ಲಿರುವ ಜೋಗ– ಭಟ್ಕಳ ಸಂಪರ್ಕ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಕೋಗಾರು ಗ್ರಾಮದಿಂದ 2 ಕಿಮೀ ಅಂತರದಲ್ಲಿ ಸಿಗುವ ಧಾರ್ಮಿಕ ಕ್ಷೇತ್ರ ಭೀಮೇಶ್ವರ.

ಇದು ಪಶ್ಚಿಮ ಘಟ್ಟದ ಭೋರ್ಬಂಡೆಯ ಕೆಳಭಾಗದಲ್ಲಿ ನಿರ್ಮಾಣಗೊಂಡಿರುವ ಶಿವನ ಪುರಾಣ ಪ್ರಸಿದ್ದ ಗುಹಾ ಮಂದಿರವಾಗಿದೆ. ಇಲ್ಲಿ ಶಿವ ಶಕ್ತಿಯೊಂದಿಗೆ ಆದಿ ಶಕ್ತಿಯನ್ನು ಪ್ರತಿಷ್ಠಾಪಿಸಿದ್ದು, ವಿಘ್ನೇಶ್ವರನ ಜೊತೆಗೆ ಭಾರೀ ಗಾತ್ರದ ಕ್ಷೇತ್ರಪಾಲ ನಂದಿಯ ವಿಗ್ರಹವನ್ನೂ ಪೂಜಿಸಲಾಗುತ್ತಿದೆ. ಅಜ್ಞಾತವಾಸ ಕಾಲದಲ್ಲಿ ಪಾಂಡವರು ಇಲ್ಲಿಗೆ ಬಂದು ತಂಗಿದ ಸಂಧರ್ಭ ಶಿವರಾತ್ರಿ ದಿನವಾಗಿದ್ದು, ಪರಮ ಶಿವಭಕ್ತ ಧರ್ಮರಾಯನಿಗೆ ಪೂಜೆಗೆಂದು ಬಲಭೀಮ ನಿರ್ಮಾಣ ಮಾಡಿ ಪ್ರತಿಷ್ಠಾಪಿಸಿದ ಶಿವಾಲಯ ಇದಾಗಿದೆ. ಆ ಕಾರಣಕ್ಕೆ ಇಲ್ಲಿನ ಶಿವ ಮಂದಿರಕ್ಕೆ ಭೀಮೇಶ್ವರ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.

ADVERTISEMENT

ದಟ್ಟಡವಿಯ ನಡುವೆ ನಿಸರ್ಗ ರಮಣೀಯವಾದ ವನರಾಶಿಗಳ ನಡುವೆ ದೊಡ್ಡ ಬಂಡೆಯೊಂದರ ಕೆಳಗೆ ಕೊರೆದಿರುವ ಗುಹಾ ಮಂದಿರವಾಗಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಪುಣ್ಯ ಕ್ಷೇತ್ರದ ಜೊತೆಗೆ ಪ್ರವಾಸಿ ತಾಣವಾಗಿಯು ರೂಪುಗೊಳ್ಳುತ್ತಿದೆ.

ಶಿವರಾತ್ರಿಯೊಂದಿಗೆ ಆರಂಭವಾಗುವ ಜಾತ್ರೋತ್ಸವ 5 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶತರುದ್ರ ಹವನ, ಕಲ್ಪೋಕ್ತ ಪೂಜೆ ಸೇರಿದಂತೆ ಇತರ ಪೂಜಾ ಕ್ರಿಯೆಗಳು ನಡೆಯಲಿದೆ. ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಡಳಿತ ಸಮಿತಿ ಹಮ್ಮಿಕೊಂಡಿದೆ.

ಭಾರಂಗಿ ಹೋಬಳಿಯಲ್ಲಿ ಪುರಾತನವಾದ ದೇವಾಲಯಗಳ ಸಾಲಿನಲ್ಲಿ ಈ ಕ್ಷೇತ್ರ ಪ್ರಮುಖವಾಗಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಾಲಯಕ್ಕೆ ಈ ಹಿಂದೆ ರಾಜ–ಮಹಾರಾಜರು ಕೊಟ್ಟಿರುವ ಚಿನ್ನ, ಬೆಳ್ಳಿಯ ಆಭರಣಗಳನ್ನು ಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಕಂದಾಯ ಇಲಾಖೆ ಮೇಲುಸ್ತುವಾರಿಯಲ್ಲಿ ದೇವರಿಗೆ ತೊಡಿಸಿ ಪೂಜೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ.

ಈ ಶಿವಕ್ಷೇತ್ರದಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ವ್ಯವಸ್ಥಿತ ರಸ್ತೆ, ಕುಡಿಯುವ ನೀರು, ಭೋಜನಾಲಯ, ವಸತಿ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾಗಿದ್ದಾರೆ.

ಭೀಮೇಶ್ವರದ ಸಂಪರ್ಕ ಮಾರ್ಗ.. ಶಿವಮೊಗ್ಗದಿಂದ ಜೋಗ ಕಾರ್ಗಲ್ ಇಲ್ಲವೇ ಸಿಗಂದೂರು ದೇವಾಲಯದ ಮೂಲಕ ಭೀಮೇಶ್ವರಕ್ಕೆ ತೆರಳಲು ಅವಕಾಶವಿದೆ. ಸಾಗರದಿಂದ ಪ್ರತಿನಿತ್ಯವೂ ಭಟ್ಕಳಕ್ಕೆ ಸಂಚರಿಸುವ ಬಸ್ ಮಾರ್ಗದಲ್ಲಿ ತಾಲ್ಲೂಕು ಕೇಂದ್ರದಿಂದ 65 ಕಿ.ಮೀ. ದೂರದಲ್ಲಿ ಹೆದ್ದಾರಿಯಿಂದ ಇಳಿದು ಹಿಡಿಂಬಾ ವನದ ಒಳಭಾಗಕ್ಕೆ 2 ಕಿಮೀ ರಸ್ತೆಯಲ್ಲಿ ಕಚ್ಚಾ ರಸ್ತೆಯಲ್ಲಿ ಸಂಚರಿಸಬೇಕು. ಯಾವುದೇ ವಾಹನಗಳು ಹಾಲಿ ದೇವಾಲಯದ ಸಮೀಪದವರೆಗೂ ಹೋಗುವ ವ್ಯವಸ್ಥೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.