ADVERTISEMENT

ಪ್ರಜ್ಞಾವಂತ ಸಮಾಜಕ್ಕಾಗಿ ಭೋವಿ ಸಮಾವೇಶ 24ಕ್ಕೆ

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 6:40 IST
Last Updated 18 ಏಪ್ರಿಲ್ 2022, 6:40 IST
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ   

ಶಿವಮೊಗ್ಗ: ಸಾಂಘಿಕ ಶಕ್ತಿಯಾಗಿ ರೂಪಿಸುವ ಮೂಲಕ ಸಮಾಜದ ಹಕ್ಕನ್ನು ಪಡೆಯಲು ಹಾಗೂ ಪ್ರಜ್ಞಾವಂತ ಸಮಾಜ ನಿರ್ಮಿಸುವ ಉದ್ದೇಶದಿಂದ ಏ.24ರಂದು ಭೋವಿ ಸಮಾಜದ ಬೃಹತ್ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ-ಬಾಗಲಕೋಟೆಯ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿಗಳಿಂದ ಕೂಡಿದ ಈ ಭೋವಿ ಸಮಾಜ ನಗರೋತ್ಥಾನ, ನಾಗರಿಕತೆಯ ಸಮಾಜಕ್ಕೆ ಮತ್ತು ನಗರ ಸಮಾಜಕ್ಕೆ ಬಂಡೆಗಳನ್ನು ಒಡೆಯುವ ಮೂಲಕ ಮಹಾಲ್ ಮಂದಿರಗಳು, ಮಸೀದಿಗಳು ಮತ್ತು ಗುರು ಮನೆಗಳನ್ನು ಕಟ್ಟಿಕೊಂಡು ಬಂದಿರುವ ಸಮಾಜವಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಯಕ ಭಾಗ್ಯ ಕೊಡಿ: ‘ಇದು ಕೇವಲ ಬಂದು ಹೋಗುವ ಸಮಾವೇಶವಾಗದೆ ಜಾಗೃತಿಯ ಸಮಾವೇಶವಾಗಿ ಹೊರ ಹೊಮ್ಮಬೇಕಿದೆ.

ADVERTISEMENT

ಔದ್ಯೋಗಿಕ ಸವಾಲುಗಳು ನಮ್ಮ ಮುಂದೆ ಇವೆ. ಶೇ 90ರಷ್ಟು ಯುವಕರು ನಿರುದ್ಯೋಗಿಗಳಾಗಿ ಖಾಲಿ ಕೈಯಲ್ಲಿ ಕುಳಿತಿದ್ದಾರೆ.ಸಮಾಜದ ಕುಲ ಕಸುಬಾದ ಬಂಡೆ ಒಡೆಯುವ ಬದುಕಿನಿಂದಲೂ ಯುವಕರು ವಂಚಿತರಾಗಿದ್ದಾರೆ. ಕ್ಷೀರಭಾಗ್ಯ, ಅನ್ನಭಾಗ್ಯ, ಶಾದಿಭಾಗ್ಯದ ಜತೆಗೆ ನಮ್ಮ ಭೋವಿ ಸಮಾಜಕ್ಕೆ ‘ಕಾಯಕ ಭಾಗ್ಯ ಕೊಡಿ’ ಎಂಬುದು ನಮ್ಮ ಬೇಡಿಕೆಯಾಗಿದೆ. ನಮಗೆ ಕಾಯಕ ಕೊಟ್ಟರೆ ಸರ್ಕಾರಕ್ಕೆ ಬೊಕ್ಕಸವೂ ತುಂಬಲಿದೆ’ ಎಂದು ಸ್ವಾಮೀಜಿ ಹೇಳಿದರು.

ಕನಿಷ್ಠ ₹ 2 ಸಾವಿರ ಕೋಟಿ ಕೊಡಿ:ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ನೇಮಕಗೊಳಿಸಬೇಕು. ಪರಿಶಿಷ್ಟ ಜಾತಿಯಲ್ಲಿ 101 ಪಂಗಡಗಳಿವೆ.
₹ 25 ಸಾವಿರ ಕೋಟಿ ಎತ್ತಿಡಲಾಗಿದೆ. ಈ ಪಂಗಡಗಳಲ್ಲಿ ಶೇ 15 ರಷ್ಟು ಭೋವಿ ಸಮಾಜವಿದೆ. ಕನಿಷ್ಠ ₹ 2 ಸಾವಿರ ಕೋಟಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಸಿದ್ಧರಾಮೇಶ್ವರ ಅಧ್ಯಯನ ಪೀಠಕ್ಕೆ ಒತ್ತಾಯ: ‘ಇಂದು ಫೇಕ್ ಸರ್ಟಿಫಿಕೇಟ್‌ ಹಾವಳಿ ಹೆಚ್ಚಿದೆ. ಸರಿಯಾದ ಫಲಾನುಭವಿಯನ್ನು ಗುರುತಿಸಬೇಕು. ಕೆಪಿಎಸ್‌ಯಲ್ಲಿ ಸಮಾಜದ ಪ್ರತಿನಿಧಿ ಇರಬೇಕು ಎಂಬುದು ನಮ್ಮ ಬೇಡಿಕೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿದ್ಧರಾಮೇಶ್ವರ ಅಧ್ಯಯನ ಪೀಠವನ್ನು ಆರಂಭಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಿದ್ದೇವೆ’ ಎಂದರು.

ಈ ಸಮಾವೇಶದಲ್ಲಿ ಹಲವಾರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಸಿದ್ದರಾಮೇಶ್ವರ ವೇದಿಕೆ, ಜಿ. ಬಸವಣ್ಯಪ್ಪರ ವೇದಿಕೆ, ಪುರುಷೋತ್ತಮ ದಾನಿಗಳ ವೇದಿಕೆ, ಅಂಬೇಡ್ಕರ್ ವೇದಿಕೆ, ಅತಿಥಿ ವೇದಿಕೆ, ದುರ್ಗಾ ಭೋವಿ ವೇದಿಕೆ ನಿರ್ಮಿಸಲಾಗಿದೆ. 25 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಭಾಗವಹಿಸು
ವರು. ಸ್ಮರಣ ಸಂಚಿಕೆಯನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲಾ ಭೋವಿ ವಿದ್ಯಾವರ್ಧಕರ ಸಂಘದ ಅಧ್ಯಕ್ಷ ಎನ್. ರವಿಕುಮಾರ್, ಪಾಲಿಕೆ ಸದಸ್ಯ ಧೀರಾಜ್ ಹೊನ್ನವಿಲೆ, ಕೃಷ್ಣಪ್ಪ, ಲೋಕೇಶ್, ಹರ್ಷ ಭೋವಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.