ಶಿವಮೊಗ್ಗ: ಸೋನಿಯಾ ಗಾಂಧಿ ಸೆರಗು ಹಿಡಿದುಕೊಂಡು ಓಡಾಡುತ್ತಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆರ್‌ಎಸ್‌ಎಸ್, ಮೋದಿ ಅವರನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕುಟುಕಿದರು.
ನಗರದಲ್ಲಿ ಶುಕ್ರವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಔರಂಗಜೇಬ್ ಕೆಡವಿದ್ದ ಕಾಶಿ ದೇವಾಲಯವನ್ನು ಅಹಲ್ಯಾಬಾಯಿ ಹೋಳ್ಕರ್ ಮರು ನಿರ್ಮಾಣ ಮಾಡಿದ್ದರು. ನಾನು ಮತ್ತು ಸಿದ್ದರಾಮಯ್ಯ ಅದೇ ಸಂತತಿಯವರು. ಆದರೆ, ಸಿದ್ದರಾಮಯ್ಯ ಈಗ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಅವರು ಅಹಲ್ಯಾಬಾಯಿ ಹೋಳ್ಕರ್ ಸಂತತಿಯೇ ಎಂಬ ಅನುಮಾನ ಮೂಡುತ್ತದೆ. ಅವರು ಜಿನ್ನಾ ಸಂತತಿ ಇರಬಹುದು’ ಎಂದರು.
ಸ್ಥಾನ ಮಾನಕ್ಕಾಗಿ ಪಕ್ಷಾಂತರ ಮಾಡುವ ಸಿದ್ದರಾಮಯ್ಯ ನೆಹರೂ ಮತ್ತು ಮೋದಿ ಅವರ ಹೋಲಿಕೆ, ಆರ್‌ಎಸ್‌ಎಸ್ ವಿದೇಶಿ ಸಂಘಟನೆ ಎಂಬ ಟೀಕೆ ಖಂಡನೀಯ. ಇಂತಹ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಆರ್‌ಎಸ್‌ಎಸ್ ಸ್ವಾತಂತ್ರ್ಯ ಪೂರ್ವದಿಂದಲೂ ರಾಷ್ಟ್ರಭಕ್ತಿ, ಹಿಂದುತ್ವ ಉಳಿಸಲು ಶ್ರಮಿಸುತ್ತಿದೆ. ನೆಹರೂ ಮತ್ತು ಅವರ ಸ್ನೇಹಿತರು ತಮ್ಮ ಅಧಿಕಾರದ ಆಸೆಗೆ ದೇಶವನ್ನೇ ಇಬ್ಭಾಗ ಮಾಡಿದ್ದರು. ಹಿಂದೂಸ್ತಾನ ಮತ್ತು ಪಾಕಿಸ್ತಾನ ಸೃಷ್ಟಿಸಿದ್ದರು. ಪ್ರಧಾನಿ ಮೋದಿ ಕಾಶ್ಮೀರದಲ್ಲಿದ್ದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ತೆಗೆದುಹಾಕಿ ಈ ದೇಶಕ್ಕೆ ಒಂದೇ ಸಂವಿಧಾನ ಮತ್ತು ಧ್ವಜ ಎಂಬ ನಿಯಮ ಜಾರಿಗೆ ತಂದಿದ್ದಾರೆ. ವಿಶ್ವವೇ ಅವರನ್ನು ಮೆಚ್ಚಿಕೊಂಡಿರುವ ನಾಯಕ ಎಂದು ಬಣ್ಣಿಸಿದರು.
ಅಲೆಮಾರಿ ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ಒಂದುಸಲ ಚಾಮುಂಡೇಶ್ವರಿ, ಇನ್ನೊಮ್ಮೆ ಬಾದಾಮಿ. ಈಗ ಅಲ್ಲಿಯೂ ಸೋಲುವ ಭೀತಿಯಿಂದ ಬೆಂಗಳೂರಿನ ಜಮೀರ್ ಅಹಮದ್ ಕ್ಷೇತ್ರಕ್ಕೆ ಹೊರಟಿದ್ದಾರೆ. ಇಂತಹ ನಾಯಕರಿಗೆ ಜನರೇ ಸರಿಯಾದ ಉತ್ತರ ನೀಡುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.