ADVERTISEMENT

ಅನುವಾದ ಪ್ರಕಾರ ಈಗ ಕ್ರಿಯಾಶೀಲ ಚಟುವಟಿಕೆ

ಕಾವ್ಯ ಸಂವಾದ ವಲಸೆ ಹಕ್ಕಿಗಳ ಹುಯಿಲು, ಬಾಲ್ಟಿಕ್ ಕಡಲ ಗಾಳಿ ಪುಸ್ತಕಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:48 IST
Last Updated 8 ಮೇ 2025, 15:48 IST
ಶಿವಮೊಗ್ಗದಲ್ಲಿ ಬುಧವಾರ ಮಲೆನಾಡು ಚಿಂತಕರ ಚಾವಡಿಯಿಂದ ಆಯೋಜಿಸಿದ್ದ ಕಾವ್ಯ ಸಂವಾದ ಕಾರ್ಯಕ್ರಮದ ನೋಟ
ಶಿವಮೊಗ್ಗದಲ್ಲಿ ಬುಧವಾರ ಮಲೆನಾಡು ಚಿಂತಕರ ಚಾವಡಿಯಿಂದ ಆಯೋಜಿಸಿದ್ದ ಕಾವ್ಯ ಸಂವಾದ ಕಾರ್ಯಕ್ರಮದ ನೋಟ   

ಶಿವಮೊಗ್ಗ: ಧರ್ಮ, ಭಾಷೆ, ಜಾತಿಯತೆಯ ನೆಲೆಯಲ್ಲಿ ಹೋರಾಟ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಬೇರೆ ಬೇರೆ ಭಾಷೆಗಳ ಕೃತಿಗಳು ಕನ್ನಡಕ್ಕೆ ಅನುವಾದ ಆಗುತ್ತಿವೆ. ಇವು ಬೇರೆ ಪರಿಸರದವರ ಭಾವಕೋಶವನ್ನು ಅರ್ಥೈಸಿಕೊಳ್ಳಲು ನೆರವಾಗಿವೆ ಎಂದು ಪ್ರಾಧ್ಯಾಪಕ ಸಿರಾಜ್ ಅಹಮ್ಮದ್ ಹೇಳಿದರು.

ನಗರದಲ್ಲಿ ಬುಧವಾರ ಮಲೆನಾಡು ಚಿಂತಕರ ಚಾವಡಿಯಿಂದ ಆಯೋಜಿಸಿದ್ದ ಕಾವ್ಯ ಸಂವಾದದಲ್ಲಿ ಕಮಲಾಕರ ಭಟ್‌ ಅವರ ವಲಸೆ ಹಕ್ಕಿಗಳ ಹುಯಿಲು ಹಾಗೂ ಜಯಶ್ರೀನಿವಾಸರಾವ್ ಅವರ ಬಾಲ್ಟಿಕ್ ಕಡಲ ಗಾಳಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಈ ವೇಳೆ ಬಾಲ್ಟಿಕ್ ಕಡಲಗಾಳಿ ಕೃತಿಯ ಬಗ್ಗೆ ಮಾತನಾಡಿದ ಸಿರಾಜ್ ಅಹಮ್ಮದ್, ವೈಚಾರಿಕವಾಗಿ ಪಲ್ಲಟ ಆಗುವುದಕ್ಕೆ ಅನುವಾದವು ಪೂರಕವಾಗುತ್ತಿದೆ. ಪ್ರಸ್ತುತ ಅನುವಾದವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅನುವಾದವನ್ನು ಕ್ರಿಯಾಶೀಲ ಚಟುವಟಿಕೆ ಎಂದು ಭಾವಿಸಿರಲಿಲ್ಲ. ಈಗ ಬಹಳ ಕ್ರಿಯಾಶೀಲ ಪ್ರಕಾರ ಎಂದು ಭಾವಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ ಎಂದರು.

ADVERTISEMENT

ವಲಸೆ ಹಕ್ಕಿಗಳ ಹುಯಿಲು ಕವನ ಸಂಕಲನ ಕುರಿತು ಮಾತನಾಡಿದ ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ, ಲೇಖಕ ಬಾಲ್ಯದಿಂದ ಮುಪ್ಪಿನವರೆಗಿನ ವಲಸೆಯನ್ನು ಕಟ್ಟಿಕೊಟ್ಟಿದ್ದಾರೆ. ಕಳೆದು ಹೋಗಿದ್ದನ್ನು ಕಾವ್ಯದ ಮೂಲಕ ಅದ್ಭುತವಾಗಿ ಕಟ್ಟಿಕೊಡಲಾಗಿದೆ ಎಂದರು.
 
ಕನ್ನಡದ ಅತ್ಯುತ್ತಮ ಲೇಖಕರಲ್ಲಿ ಕಮಲಾಕರ ಕಡವೆ ಒಬ್ಬರು. ಬದುಕಿಗೆ ಸಾಮಾನ್ಯವಾದ ವಸ್ತುಗಳನ್ನೇ ಇಟ್ಟುಕೊಂಡು ಕವನ ರಚನೆ ಮಾಡಿದ್ದಾರೆ. ಮಾತಿನಂತೆ ಕಾವ್ಯವೂ ಸಹಜ ಆಗಬೇಕು. ಅದು ಬಹಳ ವರ್ಷಗಳ ಪ್ರಯತ್ನ ಇದಾಗಿದೆ. ಅವರ ಪದ್ಯಗಳಲ್ಲಿ ಅದ್ಬುತವಾದ ರೂಪಕಗಳಿವೆ. ಭಾಷೆಗಳ ಜತೆ ಆಟವಾಡಿದ್ದಾರೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಲೇಖಕರಾದ ಕಮಲಾಕರ ಕಡವೆ, ಜಯಶ್ರೀನಿವಾಸರಾವ್, ಸತ್ಯನಾರಾಯಣರಾವ್ ಅಣತಿ, ಸವಿತಾ ನಾಗಭೂಷಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.