
ಸಾಗರ: ‘ಬ್ರಾಹ್ಮಣ ಸಮುದಾಯದವರು ಎಂದ ಕೂಡಲೇ ಅವರೆಲ್ಲರೂ ಶ್ರೀಮಂತರು ಎಂಬ ಭಾವನೆ ತಪ್ಪು. ಅವರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದು ಅಂತಹವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ದೊರಕಬೇಕಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯೋಗದ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
‘ಎಲ್ಲ ಜಾತಿ, ಧರ್ಮ, ವರ್ಗದವರಿಗೆ ಯೋಜನೆಗಳು ತಲುಪಬೇಕು ಎಂಬ ನಿಲುವನ್ನು ಸರ್ಕಾರ ಹೊಂದಿದೆ. ಆಯಾ ಸಮುದಾಯದ ಬೆಳವಣಿಗೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ನಿಗಮ-ಮಂಡಳಿ ರಚನೆ ಮಾಡಿದೆ. ಅಂತಹ ನಿಗಮ-ಮಂಡಳಿಗಳ ಅಧ್ಯಕ್ಷರಾಗಿರುವವರು ತಮ್ಮ ಸಮುದಾಯದ ಅಗತ್ಯಗಳನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ನೆರವು ಕೊಡಿಸುವಲ್ಲಿ ಕ್ರಿಯಾಶೀಲರಾಗಿರಬೇಕು’ ಎಂದು ಹೇಳಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಮಾಲತೇಶ್, ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಮಾ.ಸ.ನಂಜುಂಡಸ್ವಾಮಿ, ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹೇಮಂತ್ ಕುಮಾರ್, ಪ್ರಮುಖರಾದ ಸರಸ್ವತಿ ನಾಗರಾಜ್, ಐ.ಎನ್.ಸುರೇಶ್ ಬಾಬು, ಈಳಿ ಶ್ರೀಧರ್, ಗೋಪಿ ದೀಕ್ಷಿತ್, ನೇತ್ರಾ ಉಡುಪ, ನಾರಾಯಣ ಮೂರ್ತಿ ಕಾನುಗೋಡು, ವೆಂಕಟೇಶ್ ಜೋಯಿಸ್, ಮಹಾಬಲೇಶ್ವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.