ADVERTISEMENT

ಕೈಗೂಡದ ‘ಬ್ರ್ಯಾಂಡ್‌ ತೀರ್ಥಹಳ್ಳಿ’ ಕನಸು

ಪ್ರವಾಸೋದ್ಯಮ ಇಲಾಖೆ ಪಟ್ಟಿಯಲ್ಲಿ ಮಾತ್ರ ಪ್ರವಾಸಿ ತಾಣಗಳು; ಹೊಸ ಸ್ಥಳ ಗುರುತಿಗೆ ಆಡಳಿತ ನಿರಾಸಕ್ತಿ

ನಿರಂಜನ ವಿ.
Published 9 ಫೆಬ್ರುವರಿ 2026, 4:29 IST
Last Updated 9 ಫೆಬ್ರುವರಿ 2026, 4:29 IST
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ಜೋಗಿಗುಂಡಿ
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ಜೋಗಿಗುಂಡಿ   

ತೀರ್ಥಹಳ್ಳಿ: ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಅವಕಾಶ ಇದ್ದರೂ ತಾಲ್ಲೂಕಿನಲ್ಲಿರುವ ಬಹುತೇಕ ಆಕರ್ಷಕ ಸ್ಥಳಗಳು ಇಂದಿಗೂ ಪ್ರವಾಸಿಗರಿಂದ ದೂರವೇ ಉಳಿದಿವೆ. ಸ್ಥಳೀಯ ಆಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ನಿರಾಸಕ್ತಿಯಿಂದಾಗಿ ‘ಬ್ರ್ಯಾಂಡ್ ತೀರ್ಥಹಳ್ಳಿ’ ಕನಸು ಕೈಗೂಡದಾಗಿದೆ. 

ಪ್ರವಾಸೋದ್ಯಮ ಇಲಾಖೆಯು ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 18 ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿದೆ. ಇವುಗಳನ್ನು ಹೊರತುಪಡಿಸಿ ಇನ್ನೂ ಅನೇಕ ಹೊಸ ಸ್ಥಳಗಳೂ ತಾಲ್ಲೂಕಿನಲ್ಲಿ ಇವೆ. ಅವುಗಳ ಬಗ್ಗೆ ಮಾಹಿತಿ ಕಲೆಹಾಕುವ ವಿಷಯದಲ್ಲಿ ಇಲಾಖೆ ನಿರಾಸಕ್ತಿ ತೋರಿದೆ. ಪ್ರಕೃತಿದತ್ತವಾದ ನದಿ, ಜಲಪಾತ, ಕೋಟೆ, ದೇವಸ್ಥಾನ, ಗಿರಿ–ಶಿಖರಗಳೂ ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ. ಹೀಗಿದ್ದರೂ ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವಲ್ಲಿ ಆಡಳಿತ ವಿಫಲವಾಗಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಅಂಬುತೀರ್ಥ, ಆಗುಂಬೆ, ಕುಪ್ಪಳಿ, ಕವಲೇದುರ್ಗ, ಕುಂದಾದ್ರಿ, ಬರ್ಕಣಾ, ಜೋಗಿಗುಂಡಿ, ಒನಕೆ ಅಬ್ಬೆ, ಸಿದ್ದೇಶ್ವರ ಗುಡ್ಡ, ನರಸಿಂಹ ಪರ್ವತ, ದಾವಣೀಬೈಲು, ಭೀಮನಕಟ್ಟೆ, ಅರುಣಗಿರಿ, ಚಿಪ್ಪಲಗುಡ್ಡೆ, ನವಿಲುಕಲ್ಲು, ಮೃಗವಧೆ, ಮಂಡಗದ್ದೆ ಪಕ್ಷಿಧಾಮ, ರಾಮೇಶ್ವರ ದೇವಸ್ಥಾನ, ತೂಗು ಸೇತುವೆ, ಅಚ್ಚಕನ್ಯೆ, ತಲಸಿ ಅಬ್ಬಿ ಫಾಲ್ಸ್‌, ಸಾವೇಹಕ್ಲು, ವರಾಹಿ, ಮಾಣಿ, ಕುಂಚಿಕಲ್ಲು ಸೇರಿದಂತೆ ಹಲವು ಸ್ಥಳಗಳು ಪ್ರವಾಸಿಗರ ಮನಸೂರೆಗೊಂಡಿವೆ. 

ಜಿಲ್ಲೆಯ 64 ಘೋಷಿತ ಪ್ರವಾಸಿ ತಾಣಗಳಲ್ಲಿ ಮಾಹಿತಿ ಫಲಕ, ಸಲಹಾ ಕೇಂದ್ರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ₹ 138 ಕೋಟಿ, 7 ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ, ಒಂದು ಜಿಲ್ಲೆ ಒಂದು ವಸ್ತು (ಒಡಿಒಪಿ) ಕೇಂದ್ರ ನಿರ್ಮಾಣಕ್ಕೆ ₹ 85 ಕೋಟಿ ಅನುದಾನ ಕೇಳಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ, ಉನ್ನತೀಕರಣಕ್ಕೆ ₹928 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲೂ ಸಿದ್ಧತೆ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. 

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಗುಂಬೆಯ ಸೂರ್ಯಾಸ್ತ ವೀಕ್ಷಣಾಲಯದ ಉನ್ನತೀಕರಣಕ್ಕೆ ₹25 ಕೋಟಿ, ತುಂಗಾ ತೀರದ ಜೋಗಿ ಕುತ್ರೆಗೆ ತೂಗು ಸೇತುವೆ, ಶಿಲ್ಪವನ ನಿರ್ಮಾಣಕ್ಕೆ ₹60 ಕೋಟಿ, ಆಗುಂಬೆಯಲ್ಲಿ ಪರಿಸರ ಸ್ನೇಹಿ ವಸತಿಗೃಹ ನಿರ್ಮಾಣಕ್ಕೆ ₹50 ಕೋಟಿ ಅನುದಾನ ಅಗತ್ಯವಿದ್ದು, ಈ ಸಂಬಂಧ ಡಿಪಿಆರ್‌ ಸಿದ್ಧಗೊಂಡಿದೆ ಎಂದೂ ಮಾಹಿತಿ ನೀಡಿದ್ದಾರೆ. 

ಗ್ರಾಮೀಣ ಭಾಗದಲ್ಲಿ ಅರಣ್ಯಕ್ಕೆ ಹೊಂದಿಕೊಂಡ ಸ್ಥಳಗಳನ್ನು ಗುರುತಿಸುವ ಅವಕಾಶ ಇದೆ. ಅಂತಹ ಸ್ಥಳಗಳನ್ನು ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ, ಗ್ರಾಮ ಅರಣ್ಯ ಸಮಿತಿ (ವಿಎಫ್‌ಸಿ)ಯಡಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯಬಹುದು. ಆದರೆ ಗ್ರಾಮಾಡಳಿತ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಇದರಿಂದ ಉದ್ಯೋಗ ಸೃಷ್ಟಿಯ ಅವಕಾಶ ಇದ್ದರೂ ಅದನ್ನು ಕೈಚೆಲ್ಲಲಾಗಿದೆ ಎಂಬ ದೂರುಗಳೂ ಕೇಳಿಬರುತ್ತಿವೆ. 

ಬಳಕೆಯಾಗದ ಭೀಮನಕಟ್ಟೆ ಸಂಗಮ:

ಇಲ್ಲಿನ ತುಂಗಾ, ಮಾಲತಿ ನದಿ ಸಂಗಮ ಸ್ಥಳವಾದ ಭೀಮನಕಟ್ಟೆಯು ಪೌರಾಣಿಕ ಹಿನ್ನೆಲೆ ಹೊಂದಿದೆ. ಇಲ್ಲಿ ಸದಾಕಾಲ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುತ್ತದೆ. ಸಮೀಪದಲ್ಲಿ ತೂಗು ಸೇತುವೆ ಇದ್ದು, ನೂರಾರು ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಾರೆ. ಈ ಭಾಗದಲ್ಲಿ ಬೋಟಿಂಗ್‌, ರಿವರ್‌ ರಾಫ್ಟಿಂಗ್‌, ಕಯಾಕಿಂಗ್‌ ಸೇರಿದಂತೆ ಪಕ್ಷಿವನ, ಸಸ್ಯವನ ನಿರ್ಮಿಸಿದರೆ ಸಾಕಷ್ಟು ಆದಾಯ ಗಳಿಸಬಹುದು. ಆದರೂ ಈ ಕೆಲಸ ಆಗುತ್ತಿಲ್ಲ ಎಂದು ಸ್ಥಳೀಯರಾದ ಸೌಳಿ ನಾಗರಾಜ್‌ ಬೇಸರಿಸುತ್ತಾರೆ.

ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆಯ ತುಂಗಾ-ಮಾಲತಿ ಸಂಗಮ ಪ್ರದೇಶ
ತೀರ್ಥಹಳ್ಳಿ ಪಟ್ಟಣದಲ್ಲಿರುವ ಸಿದ್ದೇಶ್ವರ ಗುಡ್ಡ
ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತ ಪ್ರಸ್ತಾವನೆ ತಯಾರಾಗಿದೆ. ಜಿಲ್ಲೆಯನ್ನು ಕೇಂದ್ರೀಕರಿಸಿ ಒಂದು ‘ವಾಟರ್‌ ಗೇಮ್‌’ ಆರಂಭಿಸಲು ಕಂದಾಯ ಭೂಮಿ ಗುರುತಿಸಲಾಗಿದೆ.
ಧರ್ಮಪ್ಪ ಟಿ.ಎಸ್.‌ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಶಿವಮೊಗ್ಗ
ಪ್ರವಾಸಿ ತಾಣಗಳು ಇದ್ದರೂ ಪ್ರಚಾರದ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳುತ್ತಿಲ್ಲ. ತೀರ್ಥಹಳ್ಳಿಗೆ ಅವಕಾಶ ಇದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ
ವಿಲ್ಮಾ ಅಂದ್ರಾದೆ (ಎಂಟಿಎ)‌ ಶಾಖಾ ವ್ಯವಸ್ಥಾಪಕರು ಸೇಂಟ್‌ ಮಿಲಾಗ್ರಿಸ್

ಪರ್ಯಾಯ ಆರ್ಥಿಕತೆ ಸೃಷ್ಟಿಗೆ ನಿರಾಸಕ್ತಿ

  ಅಡಿಕೆ ಹೊರತುಪಡಿಸಿ ಮತ್ತೊಂದು ಆರ್ಥಿಕ ವಲಯ ನಿರ್ಮಾಣ ಮಾಡುವಲ್ಲಿ ಈ ಭಾಗ ಹಿಂದೆ ಉಳಿದಿದೆ. ಬ್ರ್ಯಾಂಡ್‌ ಬೆಂಗಳೂರು ಮೈಸೂರು ಕೊಡಗು ಚಿಕ್ಕಮಗಳೂರು ಮಾದರಿಯಂತೆ ‘ಬ್ರ್ಯಾಂಡ್‌ ತೀರ್ಥಹಳ್ಳಿ’ ನಿರ್ಮಾಣಕ್ಕೆ ಸಂಬಂಧಪಟ್ಟ ಆಡಳಿತ ಮುಂದಾಗುತ್ತಿಲ್ಲ ಎಂಬುದು ನಾಗರಿಕರ ಬೇಸರ.  ಕಾಂತಾರ ಚಲನಚಿತ್ರದ ಶೂಟಿಂಗ್‌ನಿಂದಾಗಿಯೇ ಸ್ಥಳೀಯಾಡಳಿತಕ್ಕೆ ಅಂದಾಜು ₹ 5 ಕೋಟಿ ಲಾಭ ದೊರೆತಿದೆ. ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿರುತ್ತದೆ. ಈ ಅವಕಾಶಗಳನ್ನು ಬಳಸಿಕೊಂಡು ಹೊಸ ಆರ್ಥಿಕ ಸ್ವಾವಲಂಬನೆ ಸೃಷ್ಟಿಗೆ ಸಂಬಂಧಪಟ್ಟ ಆಡಳಿತವು ಪ್ರಯತ್ನಿಸುತ್ತಿಲ್ಲ ಎಂದು ಸ್ಥಳೀಯರಾದ ಅಭಿಷೇಕ್‌ ನಾಯರ್‌ ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.