ADVERTISEMENT

ಸೇತುವೆ ಹೆಸರಿನ ವಿಷಯದಲ್ಲಿ ವಿವಾದ ಸೃಷ್ಟಿ ಅಗತ್ಯವಿಲ್ಲ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಲಪ್ಪ ಹರತಾಳು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:09 IST
Last Updated 11 ಜುಲೈ 2025, 4:09 IST
ಹರತಾಳು ಹಾಲಪ್ಪ
ಹರತಾಳು ಹಾಲಪ್ಪ   

ಸಾಗರ: ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ದೇಶದ 2ನೇ ಅತೀ ದೊಡ್ಡ ಕೇಬಲ್ ಸೇತುವೆ ನಿರ್ಮಾಣವಾಗಿದ್ದು, ಆರು ದಶಕಗಳ ಈ ಭಾಗದ ಒತ್ತಾಸೆ ಕೈಗೂಡಿದೆ. ಸೇತುವೆಗೆ ಯಾವ ಹೆಸರಿಡಬೇಕು ಎಂಬ ವಿಷಯದಲ್ಲಿ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಲಪ್ಪ ಹರತಾಳು ಪ್ರತಿಪಾದಿಸಿದ್ದಾರೆ.

ಇಲ್ಲಿನ ನೆಹರೂ ಮೈದಾನದಲ್ಲಿ ಜುಲೈ 14ರಂದು ನಡೆಯಲಿರುವ ಸೇತುವೆ ಲೋಕಾರ್ಪಣೆ ಕಾರ್ಯಕ್ರಮದ ವೇದಿಕೆ ನಿರ್ಮಾಣದ ಸಿದ್ಧತೆಯನ್ನು ಗುರುವಾರ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸೇತುವೆ ನಿರ್ಮಾಣವಾಗಿರುವ ಸ್ಥಳವನ್ನು ಹೊಳೆಬಾಗಿಲು ಎಂದೇ ಹಿಂದಿನಿಂದಲೂ ಕರೆಯಲಾಗುತ್ತಿದೆ. ಸಿಗಂದೂರು ಕ್ಷೇತ್ರ ಪ್ರವರ್ಧಮಾನಕ್ಕೆ ಬಂದ ನಂತರ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿರುವುದರಿಂದ ಸಹಜವಾಗಿ ಜನರು ಸಿಗಂದೂರು ಸೇತುವೆ ಎಂದು ಅದನ್ನು ಕರೆಯುತ್ತಿದ್ದಾರೆ. ಸೇತುವೆ ಯಾವ ಹೆಸರು ಇಡಬೇಕು ಎನ್ನುವುದಕ್ಕಿಂತ, ಅಸಾಧ್ಯ ಎಂದೇ ಹೇಳಲಾಗುತ್ತಿದ್ದ ಸೇತುವೆಯು ಸಂಚಾರಕ್ಕೆ ಮುಕ್ತವಾಗುವುದು ಮುಖ್ಯ ಎಂದರು.

ADVERTISEMENT

ಶಿವಮೊಗ್ಗದಲ್ಲಿ ನಡೆದ ಬಿಜೆಪಿ, ಸಂಘ ಪರಿವಾರದ ಪ್ರಮುಖರ ಸಭೆಯಲ್ಲಿ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡಲು ಸಲಹೆ ನೀಡಲಾಗಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರದ ಸಾರಿಗೆ ಇಲಾಖೆಯಿಂದ ಕೈಗೊಳ್ಳಲಿರುವ ಹಾಗೂ ಮುಕ್ತಾಯಗೊಂಡಿರುವ ₹10,000 ಕೋಟಿ ಮೊತ್ತದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯೂ ಅಂದೇ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಸೇತುವೆ ನಿರ್ಮಾಣದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ‘ಕಾರ್ಯಕ್ರಮವನ್ನು ಆಯೋಜಿಸುವ ಇಲಾಖೆ ಆ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ’ ಎಂದು ಅವರು ಉತ್ತರಿಸಿದರು.

ಪ್ರಮುಖರಾದ ಡಾ.ರಾಜನಂದಿನಿ ಕಾಗೋಡು, ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ಮೈತ್ರಿ ಪಾಟೀಲ್, ಸವಿತಾ ವಾಸು, ಮಧುರಾ ಶಿವಾನಂದ್, ವೀರರಾಜ್ ಜೈನ್ ವಳಗೆರೆ, ಮಂಜಯ್ಯ ಜೈನ್, ಬಿ.ಟಿ.ರವೀಂದ್ರ, ಅರುಣ್ ಕುಗ್ವೆ, ವಿ.ಮಹೇಶ್, ಹು.ಭಾ.ಅಶೋಕ್, ಪರಶುರಾಮ್, ಶ್ರೀರಾಮ್, ಸುಜಯ್ ವಾಮನ್ ಶೆಣೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.