ಶಿಕಾರಿಪುರ (ಶಿವಮೊಗ್ಗ): ‘ಸೈಕಲ್ ಮೇಲೆ ಓಡಾಡಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ದಕ್ಷಿಣ ಭಾರತದಲ್ಲಿ ಬಿಜೆಪಿ ಇಂದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದಕ್ಕೆ ಅವರ ಕೊಡುಗೆ ಮಹತ್ವದ್ದು’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.
ಇಲ್ಲಿನ ಕುಮದ್ವತಿ ಶಿಕ್ಷಣ ಸಂಸ್ಥೆಯ ಏಕಲವ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ 84ನೇ ಜನ್ಮದಿನ ಆಚರಣೆ ಸಮಾರಂಭದಲ್ಲಿ ಅಭಿನಂದನಾ ನುಡಿ ಸಲ್ಲಿಸಿದರು.
‘ಸತತ ಹೋರಾಟದ ಮೂಲಕ ‘ಆಹೋರಾತ್ರಿ ಧರಣಿ’ ಎಂಬ ಶಬ್ಧವನ್ನು ನಾಡಿಗೆ ಕೊಟ್ಟವರು ಯಡಿಯೂರಪ್ಪ. ತುರ್ತು ಪರಿಸ್ಥಿಯಲ್ಲಿ ಜೈಲಿಗೆ ಹೋದವರು. ಸೈಕಲ್ ಮೇಲೆ ಓಡಾಡಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ಪಕ್ಷವಾಗಿ ಬಿಜೆಪಿ ಕಟ್ಟಿ ಬೆಳೆಸಿ ಅದಕ್ಕೆ ನಾಯಕತ್ವ ಕೊಟ್ಟವರು ಯಡಿಯೂರಪ್ಪ’ ಎಂದು ಹೇಳಿದರು.
ಹುಬ್ಬಳ್ಳಿಯ ಈದ್ಗಾ ಮೈದಾನ, ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿ ಯಡಿಯೂರಪ್ಪ
ಅವರು ಪಾಲ್ಗೊಂಡಿದ್ದನ್ನು ಜೋಶಿ ಸ್ಮರಿಸಿದರು.
‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿಕಾರಿಪುರ ತಾಲ್ಲೂಕಿನ ಹೆಸರು ಇಡೀ ದೇಶಕ್ಕೆ ಗೊತ್ತಿದ್ದರೆ ಅದಕ್ಕೆ ಯಡಿಯೂರಪ್ಪ ಅವರೇ ಕಾರಣ. ಯಡಿಯೂರಪ್ಪ ಅಂದರೆ ಶಿಕಾರಿಪುರ, ಶಿಕಾರಿಪುರ ಅಂದರೆ ಯಡಿಯೂರಪ್ಪ ಆಗಲು ಅವರ ಕರ್ತೃತ್ವ ಶಕ್ತಿ ಕಾರಣ’ ಎಂದು ಬಣ್ಣಿಸಿದರು.
ವೈಮನಸ್ಸು ಉಂಟಾದರೂ ಪ್ರಚಾರಕ್ಕೆ ಬಂದಿದ್ದರು: ‘ಲೋಕಸಭಾ ಕ್ಷೇತ್ರವೊಂದರ ಟಿಕೆಟ್ ಹಂಚಿಕೆ ವಿಚಾರದಲ್ಲಿ ನನಗೂ ಯಡಿಯೂರಪ್ಪ ಅವರಿಗೂ ವೈಮನಸ್ಸು ಆಗಿತ್ತು. ಅವರು ಬೇಜಾರು ಆಗಿದ್ದಾರೆ. ಚುನಾವಣೆಯಲ್ಲಿ ನನ್ನ ಪರ ಪ್ರಚಾರಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಇತ್ತು. ಆದರೆ, ಫೋನ್ ಮಾಡಿ ಹುಬ್ಬಳ್ಳಿಗೆ ಬಂದ ಯಡಿಯೂರಪ್ಪ ನನ್ನ ಪರ ಪ್ರಚಾರ ಮಾಡಿ ಗೆಲ್ಲಿಸಿದರು’ ಎಂದು ಜೋಶಿ ಸ್ಮರಿಸಿದರು.
‘ಹೋರಾಟಗಾರ ಯಡಿಯೂರಪ್ಪ ಶೀಘ್ರ ಕೋಪಿ, ಆದರೆ ದೀರ್ಘ ದ್ವೇಷಿ
ಅಲ್ಲ ಎಂಬುದಕ್ಕೆ ಇದು ಸಾಕ್ಷಿ’ ಎಂದು ಹೇಳಿದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಸಿಮೆಂಟ್ ಮಂಜು, ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ, ಡಾ.ಧನಂಜಯ ಸರ್ಜಿ, ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಬಿ.ಶ್ರೀರಾಮುಲು, ಬಿ.ಸಿ.ಪಾಟೀಲ, ಮಾಜಿ ಶಾಸಕರಾದ ಎಸ್. ರುದ್ರೇಗೌಡ, ಕೆ.ಬಿ.ಅಶೋಕ ನಾಯ್ಕ, ರೂಪಾಲಿ ನಾಯ್ಕ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಮೈಸೂರು ಶಾಸಕ ಶ್ರೀವತ್ಸ ಹಾಜರಿದ್ದರು.
‘ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವೆ’
ಶಿಕಾರಿಪುರ: ‘ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಏಕೈಕ ಗುರಿಯೊಂದಿಗೆ ಮುನ್ನಡೆಯುವೆ’ ಎಂದು ಅಭಿನಂದನೆ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಹೇಳಿದರು. ‘ಮಾತು ಸಾಧನೆಯಾಗಬಾರದು; ಬದಲಿಗೆ ಸಾಧನೆಯೇ ಮಾತು ಆಗಬೇಕು ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟವನು ನಾನು. ಅದಕ್ಕೆ ಶ್ರಮವಹಿಸಿ ಕೆಲಸ ಮಾಡುವುದು ಅಗತ್ಯ’ ಎಂದರು. ‘ಶೋಷಿತರ ದಮನಿತರ ಏಳಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ರೈತರು ಸ್ವಾವಲಂಬಿ ಆಗಲು ರಾಜ್ಯದ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ’ ಎಂದರು. ‘ಶಿಕಾರಿಪುರ ಶಿವಮೊಗ್ಗದ ರೀತಿ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಈ ಭ್ರಷ್ಟ ವ್ಯವಸ್ಥೆ ಕಿತ್ತೊಗೆದು ನಾಡಿನ ಜನರು ನೆಮ್ಮದಿಯ ಬದುಕು ಕಟ್ಟಿಕೊಡಲು ಟೊಂಕ ಕಟ್ಟುವೆ’ ಎಂದು ಹೇಳಿದರು. ‘ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಜನರ ಪ್ರೀತಿ ಋಣ ಎಷ್ಟು ತೀರಿಸಿದರೂ ಕಡಿಮೆ’ ಎಂದು ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.