ADVERTISEMENT

ತನುಜಾಗೆ ‘ನೀಟ್’ ಬರೆಯಲು ಬಿಎಸ್‌ವೈ, ಸುಧಾಕರ್ ನೆರವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 20:55 IST
Last Updated 14 ಅಕ್ಟೋಬರ್ 2020, 20:55 IST
ತನುಜಾ
ತನುಜಾ   

ಬೆಂಗಳೂರು: ನೆಟ್‌ವರ್ಕ್ ಸಮಸ್ಯೆ ಹಾಗೂ ಕೋವಿಡ್ ವರದಿಗೆ ಸಂಬಂಧಿಸಿದ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸೂಕ್ತ ಸಮಯದಲ್ಲಿ ಇ-ಮೇಲ್ ಕಳುಹಿಸಲು ಸಾಧ್ಯವಾಗದ ಕಾರಣ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್‌) ಗೈರಾಗುವ ಆತಂಕದಲ್ಲಿದ್ದ ವಿದ್ಯಾರ್ಥಿನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಧ್ಯಪ್ರವೇಶದಿಂದ ಪರೀಕ್ಷೆ ಬರೆದಿದ್ದಾಳೆ.

ಶಿವಮೊಗ್ಗದ ನವೋದಯ ಶಾಲೆಯ ತನುಜಾಕಳೆದ ವರ್ಷ ಪಿಯುಸಿ ಪೂರ್ಣಗೊಳಿಸಿದ್ದಳು. ಈಕೆಯ ಪ್ರತಿಭೆಯನ್ನು ಗುರುತಿಸಿದ್ದ ನವೋದಯ ಶಾಲೆಯ ಆಡಳಿತ ಮಂಡಳಿ, ಪುಣೆಯಲ್ಲಿ ನಡೆದ ತರಬೇತಿಗೂ ಆಯ್ಕೆ ಮಾಡಿತ್ತು. ಸೆ. 13ರಂದು ನಡೆದ ನೀಟ್ ವೇಳೆ ತನುಜಾಳ ಮನೆಯ ಪ್ರದೇಶವನ್ನು ಕಂಟೇನ್‌ಮೆಂಟ್‌ ವಲಯವೆಂದು ಘೋಷಿಸಲಾಗಿತ್ತು. ಜತೆಗೆ, ತನುಜಾಗೂ ಜ್ವರ ಬಂದಿದ್ದರಿಂದ ಪರೀಕ್ಷೆಗೆ ಹಾಜರಾಗಿರಲಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಟೆಸ್ಟಿಂಗ್‌ ಏಜೆನ್ಸಿ (ಎನ್‍ಟಿಎ) ಮತ್ತೊಮ್ಮೆ ಪರೀಕ್ಷೆ ಏರ್ಪಡಿಸಿತು. ಈ ಬಾರಿ ಪರೀಕ್ಷೆ ಬರೆಯಲು ಕೋವಿಡ್ ಸಂಬಂಧಿಸಿದ ವರದಿ ಮತ್ತು ಕೆಲವು ದಾಖಲೆಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕು ಎಂದೂ ಎನ್‍ಟಿಎ ಸೂಚಿಸಿತ್ತು.

ಆದರೆ, ತನಗೆ ಎದುರಾದ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ತನುಜಾ ಹೇಳಿಕೊಂಡಿದ್ದನ್ನು ಗಮನಿಸಿದ ಮುಖ್ಯಮಂತ್ರಿ, ಹಿರಿಯ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿದ್ದರು. ಎನ್‌ಟಿಎ ತಾಂತ್ರಿಕ ನಿರ್ದೇಶಕರ ಜೊತೆ ಸಚಿವ ಸುಧಾಕರ್‌ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಮೂಲಕ ತನುಜಾಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.