ಅಪಘಾತಕ್ಕೀಡಾದ ಬಸ್
ಶಿವಮೊಗ್ಗ: ತಾಲ್ಲೂಕಿನ ಗಾಜನೂರು ಅಗ್ರಹಾರ ಬಳಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ದುರ್ಗಾಂಬ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸ್ ಮಂಗಳೂರಿನಿಂದ ರಾತ್ರಿ ಹೊರಟಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ತಲುಪಬೇಕಿತ್ತು. ಬುಧವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬಸ್ಸಿನ ನಿರ್ವಾಹಕ, ಹೊಸನಗರದ ಅಣ್ಣಪ್ಪ (38) ಹಾಗೂ ಪ್ರಯಾಣಿಕ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಹರ್ಷಿತ್ (25) ಸ್ಥಳದಲ್ಲಿಯೇ ಮೃತಪಟ್ಡಿದ್ದಾರೆ. ಅಣ್ಣಪ್ಪ ಈಚೆಗಷ್ಟೇ ಕೆಲಸಕ್ಕೆ ಸೇರಿದ್ದರು ಎಂದು ತಿಳಿದುಬಂದಿದೆ.
ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ 13 ಜನ ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸೇರಿ ವಿವಿಧೆಡೆ ದಾಖಲು ಮಾಡಲಾಗಿದೆ.
ಗಾಯಾಳುಗಳು: ಉಮೇಶ್(50), ಪ್ರಸಾದ್(40), ವಿಷ್ಣು(21), ಮಂಜುನಾಥ್ (45), ಸುಜಾತಾ(40), ಅನಂದ್ ನಾಯ್ಕ್(50), ನೀಲಾಂಬಿಕಾ(45), ಪ್ರಸಾದ್ (43), ಬಿಂದು(20), ಶಶಾಂಕ್ (20), ಲಕ್ಷ್ಮೀ(35), ಶ್ರೀರಾಮುಲು(42) ಹಾಗೂ ಕಾರ್ತಿಕ್ (32).
ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬಸ್ಸು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ಸಿನ ಎಡ ಭಾಗ ಸಂಪೂರ್ಣ ಹಾನಿಯಾಗಿದೆ.
ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪಘಾತದಿಂದಾಗಿ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.