ADVERTISEMENT

ಸಭೆಯಲ್ಲಿ ಗದ್ದಲ: ವಿಡಿಯೊ ಮಾಡಿದ ಗ್ರಾಮಸ್ಥನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 2:56 IST
Last Updated 31 ಮಾರ್ಚ್ 2021, 2:56 IST

ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಗ್ರಾಮಸ್ಥರು ಮತ್ತು ಅಧ್ಯಕ್ಷರು, ಉಪಾಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯಿತು. ಅದನ್ನು ವಿಡಿಯೊ ಮಾಡುತ್ತಿದ್ದ ಗ್ರಾಮಸ್ಥನಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಪಾಳಕ್ಕೆ ಹೊಡೆದ ಪ್ರಸಂಗ ನಡೆದಿದೆ.

ಮಂಗಳವಾರ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ನಡೆಯುತ್ತಿದ್ದಂತೆ ಗ್ರಾಮಸ್ಥರು ಸಭೆಗೆ ಮುತ್ತಿಗೆ ಹಾಕಿ, ‘ಈ ಹಿಂದೆ ನಡೆದ ಕಾಮಗಾರಿಗಳ ಪೂರ್ಣ ತನಿಖೆ ನಡೆಯದೆ ನನೆಗುದಿಗೆ ಬಿದ್ದಿದೆ. ಈ ವೇಳೆ ಆ ಕಾಮಗಾರಿಗಳ ಲೆಕ್ಕ ಪರಿಶೋಧನೆ ನಡೆಯುವುದು ಅನುಮಾನಕ್ಕೆ ಕಾರಣವಾಗಿದೆ. ಸಭೆ ಮುಂದೂಡಬೇಕು’ ಎಂದು ಆಗ್ರಹಿಸಿದರು.

ಆಗ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ, ಗಲಾಟೆ ನಡೆಯಿತು. ಸಭೆಯಲ್ಲಿ ಗಲಾಟೆ ನಡೆಯುವುದನ್ನು ಸಂದೀಪ್ ಎಂಬ ಗ್ರಾಮಸ್ಥ ವಿಡಿಯೊ ಮಾಡುತ್ತಿದ್ದರು. ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ ವಿಡಿಯೊ ಮಾಡದಂತೆ ಎಚ್ಚರಿಸಿದ್ದಾರೆ. ಆಗ ಸಂದೀಪ್ ಮತ್ತು ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ ಅವರ ನಡುವೆ ಪರಸ್ಪರ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ADVERTISEMENT

ಗ್ರಾಮಸ್ಥರ ದೂರು: ಸಭೆಯಲ್ಲಿ ವಿಡಿಯೊ ಮಾಡುತ್ತಿದ್ದ ಗ್ರಾಮಸ್ಥನ ಮೇಲೆ ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ ಅವರು ಏಕಾಎಕಿ ಎದ್ದು ಬಂದು ಹಲ್ಲೆ ಮಾಡಿದ್ದಾರೆ. ಕಪಾಳಕ್ಕೆ ಹೊಡೆದಿದ್ದಾರೆ ಎಂದು ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಸಭೆಯಲ್ಲಿ ಈ ಹಿಂದೆ ಅವ್ಯವಹಾರ ಎಸಗಿದವರೇ ಅಧಿಕಾರದಲ್ಲಿ ಇರುವಾಗ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಈ ಹಿಂದಿನ ಎಲ್ಲ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಲ್ಲಿಯವರೆಗೆ ಸಭೆ ನಡೆಯಬಾರದು ಎಂದು ಆಗ್ರಹಿಸಿದೆವು. ಇದರಿಂದ ಕುಪಿತಗೊಂಡ ಉಪಾಧ್ಯಕ್ಷ ಕೃಷ್ಣಮೂರ್ತಿ ವಿಡಿಯೊ ಮಾಡುತ್ತಿದ್ದ ಅಮಾಯಕನ ಮೇಲೆ ಹಲ್ಲೆ ಮಾಡಿದರು. ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಬಾರದು ಎಂದು ಭಯ ಹುಟ್ಟಿಸುವ ಹುನ್ನಾರದಿಂದ ಹಲ್ಲೆ ಮಾಡಲಾಗಿದೆ. ತಪ್ಪಿತಸ್ಥ ಜನಪ್ರತಿನಿದಿಯನ್ನು ಬಂಧಿಸಬೇಕು’ ಎಂದು ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.