ADVERTISEMENT

ಜಾತಿ ಗಣತಿ; ‘ದೀವರು’ ಅದೇ ಹೆಸರು ನಮೂದು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:33 IST
Last Updated 5 ಸೆಪ್ಟೆಂಬರ್ 2025, 5:33 IST
ಶಿವಮೊಗ್ಗದ ಈಡಿಗರ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಆರ್ಯ ಈಡಿಗರ ಸಂಘದ ಸಭೆಯ ಉದ್ಘಾಟನೆಯ ನೋಟ
ಶಿವಮೊಗ್ಗದ ಈಡಿಗರ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಆರ್ಯ ಈಡಿಗರ ಸಂಘದ ಸಭೆಯ ಉದ್ಘಾಟನೆಯ ನೋಟ   

ಶಿವಮೊಗ್ಗ: ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿರುವ ದೀವರ ಸಮುದಾಯದ ಎಲ್ಲರೂ ‘ದೀವರು’ ಎಂದೇ ನಮೂದಿಸಬೇಕು ಎಂಬುದಾಗಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ ನಿರ್ಣಯ ಕೈಗೊಂಡಿದೆ.

ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಎಸ್.ರಾಮಪ್ಪ ಅವರ ನೇತೃತ್ವದಲ್ಲಿ ಈಡಿಗ ಭವನದಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ  ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸಮಾಜದ‌ ಮುಖಂಡರು ನಿರ್ಣಯವನ್ನು ಅನುಮೋದಿಸಿದರು.

ಈಡಿಗ ಸಮುದಾಯದ ಉಪ ಪಂಗಡವಾದ ದೀವರು ಸಮುದಾಯ ತನ್ನದೇ ಆದ ಸಾಂಸ್ಕೃತಿಕ ಅಸ್ಮಿತೆ ಹೊಂದಿದೆ. ಬಹುಸಂಖ್ಯಾತರಾಗಿರುವ ಈ ಸಮುದಾಯ ಹಿಂದಿನ ಜಾತಿಗಣತಿಯಲ್ಲಿ ಈಡಿಗ ಎಂದು ನಮೂದಿಸಲಾಗಿತ್ತು. ಈಗ ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ದೀವರು ಜಾತಿಯನ್ನು ನಮೂದಿಸಲು ಅವಕಾಶ ನೀಡಿದೆ. ಈಡಿಗ ಸಮುದಾಯದಲ್ಲಿ 26 ಒಳ ಪಂಗಡಗಳಿವೆ. ಎಲ್ಲರೂ 2ಎ ಮೀಸಲಾತಿಯಲ್ಲಿ ಬರುತ್ತಾರೆ. ಈಗ ಮಾಡಲಿರುವ ಜಾತಿ ಸಮೀಕ್ಷೆಯಲ್ಲಿ ದೀವರು ಎಂದು ನಮೂದು ಮಾಡುವುದರಿಂದ ಸಮಾಜದ ನಿಖರ ಸಂಖ್ಯೆ ಮತ್ತು ಸಾಮಾಜಿಕ ಶೈಕ್ಷಣಿಕ ಮಾಹಿತಿ ಲಭ್ಯವಾಗಲಿದೆ. ಈ ಅವಕಾಶವನ್ನು ಬಳಸಿಕೊಂಡು  ಗಣತಿದಾರರು ಮನೆಗೆ ಬಂದಾಗ ಕಡ್ಡಾಯವಾಗಿ ದೀವರು ಎಂದೇ ಬರೆಸಬೇಕೆಂದು ಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.

ADVERTISEMENT

ಸಭೆಯಲ್ಲಿ ಅನೇಕ ಮುಖಂಡರು ತಮ್ಮ ಅಭಿಪ್ರಾಯ ಮಂಡಿಸಿದರು. ದೀವರ ಸಮಾಜದ ಹಿನ್ನೆಲೆ ಬಗ್ಗೆ ಗೋವಿಂದಪ್ಪ ಮಳೀಮಠ ಮಾತನಾಡಿದರು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಸದಸ್ಯ ಎನ್.ಪಿ.ಧರ್ಮರಾಜ್‌, ದೀವರು ಜಾತಿ ನಮೂದಿಸುವುದರಿಂದ ಆಗುವ ಸಾಧಕ ಬಾಧಕಗಳ ಬಗ್ಗೆ ಮಾತನಾಡಿದರು. ಜಾತಿ ಗಣತಿಗೂ ಈಗಾಗಲೇ ಶಾಲಾ ದಾಖಲಾತಿಯಲ್ಲಿರುವ ಈಡಿಗ ಪ್ರಮಾಣ ಪತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಉಪ ಜಾತಿ ನಮೂದಿಸಲು ಯಾವುದೇ ಅಡ್ಡಿಯಿಲ್ಲ ಎಂದರು.

ಆರ್ಯ ಈಡಿಗ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶ್ರೀಧರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರ ಗಣತಿ ಘೋಷಣೆ ಮಾಡಿದ ಬಳಿಕ ಸಮಾಜದಲ್ಲಿ ಗೊಂದಲ ನಿರ್ಮಾಣವಾಗಿದೆ. ಇದನ್ನು ಮನಗಂಡು ಈಡಿಗರ ಸಂಘ ಸಮಾಜದ ಗಣ್ಯರು, ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಭೆ ಆಯೋಜಿಸಿದೆ. ಇಲ್ಲಿ ಬರುವ ಅಭಿಪ್ರಾಯ ಕ್ರೋಢೀಕರಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು. 

ವೇದಿಕೆಯಲ್ಲಿ ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಸಾಗರ ಸಂಘದ ಕಾರ್ಯದರ್ಶಿ ಪರಮೇಶ್ವರ, ಪ್ರಮುಖರಾದ ರಾಜಪ್ಪ ಮಾಸ್ತರ್‌,  ಹುಲ್ತಿಕೊಪ್ಪ ಗಣಪತಿ, ಎಚ್.ನಾಗರಾಜ್ , ಪ್ರೊ ಕಲ್ಲನ್, ಶ್ವೇತಾ ಬಂಡಿ, ಸುರೇಶ್ ಸ್ವಾಮಿರಾವ್, ಎಸ್. ಡಿ. ನಾಯ್ಕ್ ‌, ಈಡಿಗ ಸಂಘದ ರಾಜ್ಯ ಪ್ರತಿನಿಧಿ ರವಿ, ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಲತಾ ಮೂರ್ತಿ, ಪ್ರವೀಣ್ ಹಿರೇಇಡಗೋಡು, ತಬಲಿ ಬಂಗಾರಪ್ಪ. ಪ್ರಕಾಶ್ ಮುಡುಬ ಸಿದ್ದಾಪುರ, ಪ್ರಭಾವತಿ ಚಂದ್ರಕಾಂತ್‌, ಶ್ರೀಧರ್ ಮೂರ್ತಿ ಮತ್ತಿತರರಿದ್ದರು.

ಚಂದನ ಹೆಬ್ಬೂರ್‌ ಪ್ರಾರ್ಥಿಸಿದರು. ಕಾಗೋಡು ರಾಮಪ್ಪ ಸ್ವಾಗತಿಸಿದರು. ತೇಕಲೆ ರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಹಿಳ್ಳೋಡಿ ಕೃಷ್ಣ ಮೂರ್ತಿ ನಿರ್ಣಯ ಮಂಡನೆ ಮಾಡಿದರು. ಕುಬಟಳ್ಳಿ ರಾಮಚಂದ್ರ ವಂದಿಸಿದರು.

ನಾವು ದೀವರಾದ ಬಳಿಕವೇ ಈಡಿಗರ ಜತೆ ಸೇರಿಕೊಂಡಿರುವುದು. ಹೀಗಾಗಿ ಜಾತಿ ಸಮೀಕ್ಷೆಯಲ್ಲಿ ದೀವರು ಎಂದೇ ನಮೂದಿಸೋಣ. ಈಡಿಗ ಎಂಬ ದೊಡ್ಡ ಸಮೂಹದಲ್ಲಿಯೇ ನಾವಿರುವುದರಿಂದ ಅವರೊಂದಿಗೆ ಸೇರಿ ಮುನ್ನಡೆಯೋಣ.
ಡಾ.ಎಸ್.ರಾಮಪ್ಪ ಧರ್ಮದರ್ಶಿ ಶ್ರೀ ಕ್ಷೇತ್ರ ಸಿಗಂದೂರು
ದೀವರು ಮತ್ತು ಈಡಿಗರು ಎಲ್ಲಾ ಒಂದೇ ಎಂಬ ಭಾವನೆ ಶಿವಮೊಗ್ಗ ಜಿಲ್ಲೆಯಲ್ಲಿ ಇದೆ. ಗಣತಿಯಲ್ಲಿ ದೀವರು ಎಂದು ಬರೆಸಿದರೂ ಒಟ್ಟಾರೆಯಾಗಿ ನಾವು ಈಡಿಗ ಪಂಗಡಕ್ಕೆ ಬರುತ್ತೇವೆ. ಉಪ ಜಾತಿಗಳ ನಿಖರ ಮಾಹಿತಿ ಇದ್ದರೆ ಒಳಿತು
ಡಾ.ರಾಜನಂದಿನಿ ಕಾಗೋಡು ಈಡಿಗ ಸಮಾಜದ ಪ್ರಮುಖರು
ಹೊಸನಗರದಲ್ಲಿ ದೀವರ ವಿದ್ಯಾವರ್ಧಕ ಸಂಘ ನೂರು ವರ್ಷಗಳ ಹಿಂದೆಯೇ ಆಗಿತ್ತು. ದೀವರು ಸಮುದಾಯದ ಅಸ್ಮಿತೆಯನ್ನು ಕಾಪಾಡಿಕೊಂಡು. ಮುಖ್ಯ ವಾಹಿನಿಯೊಂದಿಗೆ ಸಾಗೋಣ.
ಬಂಡಿ ರಾಮಚಂದ್ರ ಹೊಸನಗರ ಈಡಿಗ ಸಂಘದ ಅಧ್ಯಕ್ಷರು
ರಾಜ್ಯ ಸಂಘದೊಂದಿಗೆ ಸಮನ್ವಯತೆ ಸಾಧಿಸಿ ಒಟ್ಟು ಸಮುದಾಯವಾಗಿ ಎಲ್ಲರೂ ಕೂಡಿ ಸಮಾಜ ಕಟ್ಟುವ ಕೆಲಸ ಮಾಡೋಣ. ಆ ಮೂಲಕ ಸರ್ಕಾರಿ ಸೌಲಭ್ಯ ಪಡೆಯೋಣ.
ಕಲಗೋಡು ರತ್ನಾಕರ್‌ ಜಿ.ಪಂ.ಮಾಜಿ ಅಧ್ಯಕ್ಷ

ಉಪಪಂಗಡಗಳ ವಿರೋಧಿಗಳು ನಾವಲ್ಲ: ಶ್ರೀಧರ್ ‘ನಾವು ಯಾರ ವಿರೋಧಿಗಳೂ ಅಲ್ಲ. ಈಡಿಗ ಸಂಘ ಮತ್ತು ಮುಖಂಡರಿಂದ ದೀವರ ಸಮುದಾಯಕ್ಕೆ ಅನುಕೂಲವಾಗಿದೆ. ವಿವಾಹ ಸಂಬಂಧ ಮಾಡಿಕೊಂಡಿದ್ದೇವೆ. ಹಾಸ್ಟೆಲ್‌ ವಿದ್ಯಾರ್ಥಿ ವೇತನ ಎಲ್ಲ ಪಡೆಯುತ್ತೇವೆ. ಉಪಪಂಗಡಗಳ ವಿರೋಧಿಗಳು ನಾವಲ್ಲ. ನಮ್ಮನ್ನು ನಾವಾಗಿಯೇ ಗುರುತಿಸಿಕೊಂಡು ಈಡಿಗರೊಂದಿಗೆ ಮುನ್ನಡೆಯೋಣ’ ಎಂದು ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಆರ್.ಶ್ರೀಧರ್‌ ಹುಲ್ತಿಕೊಪ್ಪ ಹೇಳಿದರು. ‘ಶ್ರೀಮಂತ ಕಲಾ ಪರಂಪರೆಯುಳ್ಳ ದೀವರ ಸಮುದಾಯವನ್ನು ಗಣತಿಯಲ್ಲಿ ಬರೆಸದೆ ಇದ್ದರೆ ಮುಂದೆ ಇಂತದೊಂದು ಆದಿಮ ಸಂಸ್ಕೃತಿಯ ಜಾತಿ ಇತ್ತೆಂಬುದೇ ಮರೆತುಹೋಗುತ್ತದೆ. ದೀವರು ಎಂದು ಬರೆಸುವುದರಿಂದ ಈಡಿಗ ಪಂಗಡದಲ್ಲಿ ಸಿಗುವ ಯಾವುದೇ ಸೌಲಭ್ಯಗಳು ತಪ್ಪುವುದಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಒಂದು ಅಭಿಯಾನ ನಡೆಯುತ್ತಿದೆ. ಈಡಿಗ ಸಂಘವೂ ನಿರ್ಣಯ ಕೈಗೊಂಡಿರುವುದು ಸಂತೋಷ’ ಎಂದು ಬರಹಗಾರ ಹರ್ಷಕುಮಾರ್‌ ಕುಗ್ವೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.