ಸಾಗರ: ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮಡಿವಾಳ ಹಾಗೂ ಅಕ್ಕಸಾಲಿಗ ಸಮುದಾಯದ ಕುರಿತು ವ್ಯಕ್ತಿಯೊಬ್ಬರು ತಮ್ಮ ಸಮುದಾಯವನ್ನು ಅವಹೇಳನ ಮಾಡಿರುವುದನ್ನು ಖಂಡಿಸಿ ಸೋಮವಾರ ಇಲ್ಲಿನ ಎಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಮಡಿವಾಳ ಹಾಗೂ ಅಕ್ಕಸಾಲಿಗ ಸಮುದಾಯದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಸಂದೇಶ ಹರಿಯಬಿಟ್ಟಿದ್ದಾರೆ. ಈ ಸಂದೇಶ ರಾಜಕೀಯ ಪ್ರೇರಿತವಾಗಿದ್ದು, ಸಮುದಾಯಗಳ ನಡುವೆ ಒಡಕು ತರುವ ಸ್ವರೂಪದಲ್ಲಿದೆ’ ಎಂದು ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷ ಕೊಟ್ರಪ್ಪ ಎಂ.ಎಸ್. ಹೇಳಿದರು.
‘ತಾಲ್ಲೂಕಿನಲ್ಲಿ ವಿವಿಧ ಸಮುದಾಯದವರು ಸಾಮರಸ್ಯದಿಂದ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅಸಭ್ಯ ಸಂದೇಶ ಹರಡುವುದರಿಂದ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿ ಅಂತಿಮವಾಗಿ ದ್ವೇಷದ ವಾತಾವರಣ ನೆಲೆಸುತ್ತದೆ. ಇಂತಹದಕ್ಕೆ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಡಬಾರದು’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.
‘ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ನೋವಾಗದಂತೆ ಸಂದೇಶಗಳನ್ನು ಹಾಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಸಂಬಂಧ ನಮ್ಮ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದನ್ನು ಮೀರಿ ಕಾನೂನನ್ನು ಉಲ್ಲಂಘಿಸಿ ಸಾಮಾಜಿಕ ಜಾಲತಾಣವನ್ನು ಬಳಸುವ ವ್ಯಕ್ತಿ ಯಾರೇ ಆಗಿದ್ದರೂ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಎಸ್‌ಪಿ ಬೆನಕ ಪ್ರಸಾದ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಪ್ರಮುಖರಾದ ರಾಮಚಂದ್ರಪ್ಪ ಮನೆಘಟ್ಟ, ರಮೇಶ್ ಕೆಳದಿ, ಗಣಪತಿ ಮುಸೊಳ್ಳಿ, ರಾಘವೇಂದ್ರ ತಾಳಗುಪ್ಪ, ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.