ADVERTISEMENT

ರಾಮೋತ್ಸವದಲ್ಲಿ ರಥೋತ್ಸವ ಸಂಭ್ರಮ

ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 5:32 IST
Last Updated 11 ಏಪ್ರಿಲ್ 2022, 5:32 IST
ಹೊಸನಗರ ತಾಲ್ಲೂಕು ರಾಮಚಂದ್ರಪುರ ಮಠದಲ್ಲಿ ನಡೆದ ರಾಮೋತ್ಸವದಲ್ಲಿ ಮಹಾ ರಥೋತ್ಸವ ನಡೆಯಿತು.
ಹೊಸನಗರ ತಾಲ್ಲೂಕು ರಾಮಚಂದ್ರಪುರ ಮಠದಲ್ಲಿ ನಡೆದ ರಾಮೋತ್ಸವದಲ್ಲಿ ಮಹಾ ರಥೋತ್ಸವ ನಡೆಯಿತು.   

ಹೊಸನಗರ: ಇಲ್ಲಿನ ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವದ ಅಂಗವಾಗಿ ರಥೋತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು.

ರಾಜ್ಯದ ವಿವಿಧೆಡೆಯ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ಬಳಿಕ ನಡೆದ ರಾಮೋತ್ಸವ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ರಾಘವೇಶ್ವರ ಭಾರತೀ ಸ್ವಾಮೀಜಿ, ‘ಜಗತ್ತಿನ ಎಲ್ಲ ಶುಭಗಳು ಒಂದಾಗಿ ರಾಮನ ಜನ್ಮಕ್ಕೆ ಕಾರಣವಾದ ನೆಲ ಭಾರತ. ಅಂತಹ ಮಹಾನ್ ವ್ಯಕ್ತಿತ್ವವನ್ನು ಈ ಜಗತ್ತಿಗೆ ಕರುಣಿಸಿದವರು ದಶರಥ, ಕೌಸಲ್ಯೆ. ಆ ಹೆತ್ತವರ ಕುರಿತು ನಾವು ಭವ್ಯವಾದ ಅನುಭೂತಿ ಹೊಂದಲೇಬೇಕಿದೆ. ಅದು ಸಾಧ್ಯವಾಗುವುದು ಈ ರಾಮನವಮಿ ಎನ್ನುವ ಪರ್ವದಲ್ಲಿ’ ಎಂದು ಹೇಳಿದರು.

ADVERTISEMENT

ಯುದ್ಧವನ್ನು ಮೀರಿ ಬೆಳೆದ ನೆಲ ಅಯೋಧ್ಯ. ಅದು ಸತ್ಯನಾಮ, ಯುಗಯುಗಾಂತರಕ್ಕೂ ನೆನಪಿಸುವ, ಧ್ಯಾನಿಸುವ ಶ್ರೇಷ್ಠ ಪುರುಷನಿಗೆ ಜನ್ಮ ನೀಡಿದ ಪ್ರದೇಶ. ಕೌಸಲ್ಯೆ-ದಶರಥರನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ನಾವಿರುವ ಪ್ರದೇಶದಿಂದ ಅಯೋಧ್ಯೆಗೂ ಹೋಗುವುದು ಸುಲಭವೇನಲ್ಲ. ಆದರೆ ರಾಮನವಮಿಯನ್ನು ಎಲ್ಲಿಯೇ ಇದ್ದರೂ ಆಚರಿಸುವುದಕ್ಕೆ ಸುಲಭ. ಇದರ ಮೂಲಕ ಪುಣ್ಯದ ಫಲ ಮತ್ತು ಭಾಗ್ಯ ದೊರೆಯಲಿದೆ. ರಾಮ ಹುಟ್ಟಿರುವುದು ನಡು ಮಧ್ಯಾಹ್ನ. ಅದು ಇಡೀ ವರ್ಷದಲ್ಲಿ ಬೆಳಕು ಹೆಚ್ಚಿರುವ ದಿನ ಶುಕ್ಲ ಪಕ್ಷ. ಹಿಂದೆಯೂ ಕತ್ತಲೆ ಇಲ್ಲ. ಮುಂದೆಯೂ ಕತ್ತಲು ದೂರ. ಆತ ಈ ಜಗತ್ತಿಗೆ ಬೆಳಕಾಗಲು ಬಂದವನು. ಆ ನಾಮ ನೆನಪಿಸಿಕೊಳ್ಳುವುದರಿಂದ ಕಷ್ಟವಿಲ್ಲ ಎಂದರು.

‘ಉನ್ನತ ಸ್ಥಾನ ಹೊಂದಿದ ಮಾತ್ರಕ್ಕೆ ನಾವು ನಮ್ಮ ಸಂಸ್ಕೃತಿಯನ್ನು ಮರೆಯಬೇಕಿಲ್ಲ. ನಮ್ಮತನ ಬಿಟ್ಟು ಪರಕೀಯರಾಗಬೇಕಿಲ್ಲ. ನಮ್ಮನ್ನು ಬೆಳೆಸಿದವರು ಯಾರು ಎನ್ನುವ ಕಲ್ಪನೆ ಸದಾ ಇರಬೇಕು. ಅದೇ ನಮ್ಮನ್ನುಉನ್ನತಸ್ಥಾನಕ್ಕೆ ತೆಗೆದುಕೊಂಡು ಹೋಗಲಿದೆ’ ಎಂದರು.

ಇದಕ್ಕೂ ಮುನ್ನ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ವಿವಿಧೆಡೆಯ ಭಕ್ತರು ತೇರು ಎಳೆದು ಧನ್ಯತೆ ಅನುಭವಿಸಿದರು.

ಸಿಗಂದೂರು ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಪ್ರಸನ್ನ ಹೆಗಡೆ ಕೆರೆಕೈ, ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ,ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಭಟ್, ಮಠದ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಗಣಪತಿ ಜಟ್ಟಿಮನೆ, ಪ್ರಖ್ಯಾತ್ರಾವ್, ವೆಂಕಟೇಶ್ ಹಾರೆಬೈಲು ಇದ್ದರು.

ಮೂವರಿಗೆ ‘ರಾಮೋತ್ಸವ ಪ್ರಶಸ್ತಿ’

ಹೊಸನಗರ: ಸಾಮಾಜಿಕ ಸೇವೆ ಪರಿಗಣಿಸಿ ರಾಮಚಂದ್ರಾಪುರ ಮಠದಿಂದರಾಮೋತ್ಸವದ ಪ್ರಯುಕ್ತ ಕೊಡಮಾಡುವ ‘ರಾಮೋತ್ಸವ ಪ್ರಶಸ್ತಿ’ಯನ್ನು ಘೋಷಣೆ ಮಾಡಲಾಗಿದೆ.

ಶ್ರೀರಾಮನ ಹೆಸರಿನಲ್ಲಿ ಕೊಡಮಾಡುವ ‘ಪುರುಷೋತ್ತಮ’ ಪ್ರಶಸ್ತಿಗೆಕರ್ಣಾಟಕ ಬ್ಯಾಂಕ್ ಎಂ.ಡಿ. ಮಹಾಬಲೇಶ್ವರ ಭಟ್ಟ, ಸೀತೆಯ ಹೆಸರಿನಲ್ಲಿ ನೀಡಲಾಗುವ ‘ಶ್ರೀಮಾತಾ’ ಪ್ರಶಸ್ತಿಗೆ ಸಾಗರ ತಾಲ್ಲೂಕಿನ ಮಂಕಳಲೆಯ ದೇವಕಮ್ಮ ಹಾಗೂ ‘ಧನ್ಯಸೇವಕ’ ಪ್ರಶಸ್ತಿಗೆ ಸಾಗರ ತಾಲ್ಲೂಕಿನ ಹೆಗ್ಗೋಡಿನಸತ್ಯನಾರಾಯಣ ಭಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಾಮ್ರಪಲಕ ಹಾಗೂ ನಗದು ಪುರಸ್ಕಾರ ಒಳಗೊಂಡಿರುತ್ತದೆ. ಸೋಮವಾರಧನ್ಯಸೇವಕ ಪ್ರಶಸ್ತಿ ಪ್ರದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.