ADVERTISEMENT

ಕಿಡಿಗೇಡಿಗಳಿಂದ ಬೆಂಕಿ; ಶಾಲಾ ಕೊಠಡಿಯಲ್ಲಿದ್ದ ಮಕ್ಕಳ ಸಮವಸ್ತ್ರ ಭಸ್ಮ

ಶಾಲಾಡಳಿತ ಸಂಶಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 2:13 IST
Last Updated 22 ಜೂನ್ 2021, 2:13 IST
ಹೊಸನಗರ ತಾಲ್ಲೂಕು ಮಾರುತಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಕಿಯಿಂದ ಭಸ್ಮವಾದ ಸಮವಸ್ತ್ರ.
ಹೊಸನಗರ ತಾಲ್ಲೂಕು ಮಾರುತಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಕಿಯಿಂದ ಭಸ್ಮವಾದ ಸಮವಸ್ತ್ರ.   

ಹೊಸನಗರ: ತಾಲ್ಲೂಕಿನ ಮಾರುತೀಪುರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಸಮವಸ್ತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.

ಸೋಮವಾರ ಬೆಳಿಗ್ಗೆ ಶಾಲಾ ಕೊಠಡಿ ತೆರೆದಾಗ ಸಮವಸ್ತ್ರದ ರಾಶಿಗೆ ಬೆಂಕಿ ಬಿದ್ದಿದ್ದು ಸುಟ್ಟು ಕರಕಲಾಗಿದ್ದವು. 2020– 21ನೇ ಸಾಲಿನ ಮಕ್ಕಳಿಗೆ ವಿತರಿಸಲು ಶಾಲಾಡಳಿತ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿತ್ತು. ಶನಿವಾರ ಸಂಜೆಯವರೆಗೂ ಸುಸ್ಥಿತಿಯಲ್ಲಿದ್ದವು. ಕೊಠಡಿಯ ಒಂದು ಕಿಟಕಿಯ ಬಾಗಿಲು ಪೂರ್ಣವಾಗಿ ಮುಚ್ಚಲು ಬರುತ್ತಿರಲಿಲ್ಲ. ಇದನ್ನು ಬಳಸಿ ಕಿಡಿಗೇಡಿಗಳು ಹೊರಗಿನಿಂದ ಬಟ್ಟೆಗೆ ಬೆಂಕಿ ಹಚ್ಚಿದ್ದಾರೆ ಎಂದು ಶಾಲಾಡಳಿತ ಸಂಶಯ ವ್ಯಕ್ತಪಡಿಸಿದೆ.

ಅನುಮಾನಕ್ಕೆ ಎಡೆ: ಬಟ್ಟೆಯನ್ನು ಕೊಠಡಿಯ ಮಧ್ಯದಲ್ಲಿ ಟೇಬಲ್ ಮೇಲೆ ಜೋಡಿಸಿಡಲಾಗಿತ್ತು. ಇದರ ಸಮೀಪವೇ ಪುಸ್ತಕ, ಇತರೆ ಪೀಠೋಪಕರಣಗಳು ಸಹ ಇದ್ದವು. ಆದರೆ, ಸಮವಸ್ತ್ರ ಮಾತ್ರ ಸುಡಲಾಗಿದೆ. ಉಳಿದ ವಸ್ತುಗಳಿಗೆ ಹಾನಿಯಾಗಿಲ್ಲ. ಇದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಶಾಸಕ ಎಚ್.ಹಾಲಪ್ಪ ಹರತಾಳು, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಾಲತಾಣದಲ್ಲಿ ತೀವ್ರ ಆಕ್ರೋಶ: ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ
ಆಕ್ರೋಶ, ಖಂಡನೆ ವ್ಯಕ್ತವಾಗಿದೆ. 'ಶಾಲೆಯೊಂದು ದೇಗುಲ ಎಂದು ಪರಿಭಾವಿಸುವಲ್ಲಿ ಬೆಂಕಿ ಇಡುವಂತಹ ಮನಸ್ಥಿತಿ ಇರುವ ಆರೋಪಿಗಳನ್ನು ಹುಡುಕಿ ಅವರಿಗೆ ತಕ್ಕ ಶಿಕ್ಷೆ ನೀಡಬೇಕು' ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.