
ತೀರ್ಥಹಳ್ಳಿ: 125 ವರ್ಷಗಳ ಸುಧೀರ್ಘ ಇತಿಹಾಸದ ಇಲ್ಲಿನ ಲೂರ್ದು ಮಾತೆ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಸಂಭ್ರಮ ಕಳೆಗಟ್ಟಿದೆ. ತಿಂಗಳಿನಿಂದಲೇ ಕ್ರಿಶ್ಚಿಯನ್ ಸಮುದಾಯದವರು ಕ್ಯಾರೆಲ್ಸ್ ಇವ್ ಮೂಲಕ ಹಬ್ಬದ ಸಡಗರವನ್ನು ಮನೆಗಳಿಗೆ ತೆರಳಿ ಪರಸ್ಪರ ಶುಭಾಷಯ ಹಂಚಿಕೊಂಡರು.
ಚರ್ಚ್ ಕಟ್ಟಡ ನಿರ್ಮಾಣದ ಹಂತದಲ್ಲಿದ್ದು, ಈ ವರ್ಷ ಜನತೆಯೆಡೆಗೆ ಕ್ರಿಸ್‌ಮಸ್ ಎಂಬ ಸಂದೇಶದ ಮೂಲಕ ಜನರನ್ನು ಆಕರ್ಷಿಸುತ್ತಿದೆ. ಡಿಸೆಂಬರ್ 21ರ ಭಾನುವಾರ ಚರ್ಚ್ ವೃತ್ತದ ಬಳಿ ಗೋದಲಿ ಉದ್ಘಾಟನೆ ನಡೆಯಿತು. 23ರ ಸಂಜೆ ಕ್ರಿಸ್‌ಮಸ್ ರ‍್ಯಾಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು. ಸಾಂತಾ ಕ್ಲಾಸ್ ವೇಷಧಾರಿಗಳು ಬೈಕ್‌ನಲ್ಲಿ ರ‍್ಯಾಲಿ ಮುನ್ನಡೆಸಿದರೆ, ಯುವ ಜನ ಡಿಜೆ ಸದ್ದಿನೊಂದಿಗೆ ಕ್ರಿಸ್‌ಮಸ್ ಕ್ಯಾರಲ್ಸ್‌ಗಳಿಗೆ ಕುಣಿದು ಕುಪ್ಪಳಿಸಿದರು. ಭಕ್ತಾದಿಗಳು ಕೆಂಪು ಧರಿಸು ಹಾಗೂ ಸಾಂತಾ ಕ್ಯಾಪ್‌ನೊಂದಿಗೆ ಭಾಗವಹಿಸಿದ್ದರು. ವಿಶೇಷವಾಗಿ ಕೇರಳದ ಚಂಡೆವಾದ್ಯ ಕ್ರಿಸ್ಮಸ್ ಕ್ಯಾರಲ್ಸ್‌ನ ಜುಗಲ್ಬಂದಿ ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿತ್ತು. ಜೀವಂತ ಗೋದಲಿಯ ರೂಪಕ ಸ್ತಬ್ಧಚಿತ್ರಗಳ ಮೂಲಕ ಮೂಡಿ ಬಂದಿತು.
1865ರಲ್ಲಿ ಬ್ರಿಟೀಷ್ ಕಾಲ ಮಾನದಲ್ಲಿ ಆರಂಭಗೊಂಡ ಧರ್ಮಕೇಂದ್ರ ಇದುವರೆಗೂ 4 ಬಾರಿ ಹೊಸದಾಗಿ ನಿರ್ಮಿಸಲಾಗಿದೆ. ಗೋವಾ, ಮೈಸೂರು ಭಾಗದಿಂದ ಫಾದರ್ ಆಗಮಿಸಿ ಭಕ್ತರಿಗಾಗಿ ಪೂಜೆ ಸಲ್ಲಿಸುತ್ತಿದ್ದರು. 1901ರಲ್ಲಿ ಪೂರ್ಣಾವಧಿಯ ಫಾದರ್ ನೇಮಕಗೊಳ್ಳುತ್ತಾರೆ. ಇದುವರೆಗೂ 33 ಧರ್ಮಗುರುಗಳು ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸಾಗರ, ಹೊಸನಗರ, ನಗರ, ಕಬಳೆ ಧರ್ಮಕೇಂದ್ರಕ್ಕೆ ತಾಯಿ ಧರ್ಮಕೇಂದ್ರವಾಗಿ ಇಲ್ಲಿನ ಧರ್ಮಕೇಂದ್ರವಿದೆ.
ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ಇತರೆ ಧರ್ಮದ ಭಾಂದವರು ಕೂಡ ಚರ್ಚ್‌ಗೆ ಭೇಟಿ ನೀಡಿ ಕ್ಯಾಂಡಲ್ ಹಚ್ಚಿ ದೇವರನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲದೇ ಕ್ರಿಶ್ಚಿಯನ್ ಸಮುದಾಯದ ಜೊತೆ ಹಬ್ಬದ ಸಡಗರದಲ್ಲಿ ಭಾಗವಹಿಸುವುದು ಅನೇಕ ವರ್ಷಗಳಿಂದಲೂ ರೂಢಿಯಲ್ಲಿದೆ. ಸೌಹಾರ್ದ ಕಾರ್ಯಕ್ರಮಗಳನ್ನು ಆಯೋಜಿಸಿ ಕ್ರಿಸ್‌ಮಸ್ ಕೇಕ್ ಹಂಚಿಕೊಳ್ಳುತ್ತಾರೆ.
ಡಿಸೆಂಬರ್ 25ರ ಹಿಂದಿನ 4ನೇ ಭಾನುವಾರದಿಂದ ಕ್ರಿಸ್ಮಮಸ್ ತಯಾರಿಯ ಸಡಗರ ಆರಂಭಗೊಂಡು ಜನವರಿ 6ರ ಮೂರು ರಾಯರ ಹಬ್ಬದೊಂದಿಗೆ ಕೊನೆಗೊಳ್ಳುತ್ತದೆ. ಹಬ್ಬದ ಭಾಗವಾಗಿ ಮನೆ ಸ್ವಚ್ಛಗೊಳಿಸುವುದು, ಅಲಂಕಾರ, ಕುಸ್ವಾರ್ ತಯಾರಿಸುವುದು, ಬಟ್ಟೆ–ಉಡುಗೊರೆಗಳ ಖರೀದಿ, ಜೊತೆಗೆ ದೂರದ ಆತ್ಮೀಯರಿಗೆ ಗ್ರೀಟಿಂಗ್ ಕಳಿಸುವ ಸಂಪ್ರದಾಯ ಕೂಡ ಇದೆ
ದಕ್ಷಿಣ ಕನ್ನಡದ ಮೂಲದ ಸಂಪ್ರದಾಯ ತೀರ್ಥಹಳ್ಳಿಯಲ್ಲಿದೆ. ಹಬ್ಬ ಆರಂಭಕ್ಕೂ ಮೊದಲೆ ಮಹಿಳೆಯರು ಮನೆಯಲ್ಲಿ ಕುಸ್ವಾರ್ (ಖಾದ್ಯ) ತಯಾರಿಸುತ್ತಾರೆ. ಹಬ್ಬದ ಹಿಂದಿನ ದಿನವೇ ಕೇಕ್ ಹಾಗೂ ಕುರುಕಲು ತಿಂಡಿಗಳನ್ನು ನೀಡಿ ಸಂತಸ ಪಡುತ್ತಾರೆ. ಕುಕ್ಕೀಸ್, ಕಿಡಿಯೋ, ಚಕ್ಕಲಿ, ಕೋಡುಬಳೆ, ಶಂಕರಪೊಳೆ, ಖರ್ಜಿಕಾಯಿ, ತರಹೇವಾರಿ ಉಂಡೆಗಳನ್ನು ಹಂಚುವುದಕ್ಕಾಗಿ ತಯಾರಿಸುತ್ತಾರೆ. ಡಿಸೆಂಬರ್ 24ರ ರಾತ್ರಿ ಚರ್ಚ್‌ನಲ್ಲಿ ಭಕ್ತಾದಿಗಳು ಒಟ್ಟು ಸೇರಿ ಸಂಭ್ರಮದ ಬಲಿಪೂಜೆಯಲ್ಲಿ ಭಾಗವಹಿಸುತ್ತಾರೆ. ನಂತರ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ.
ಕ್ರಿಸ್ತ ಜಯಂತಿಯ 2025 ವರ್ಷಗಳ ಮಹಾ ಜುಬಲಿಯಲ್ಲಿ ನಾವಿದ್ದೇವೆ. ಕ್ರಿಸ್ತ ನಾಡಿಗೆ ಶಾಂತಿ ನೆಮ್ಮದಿ ಕೀರ್ತಿ ತರಲಿ.ವ.ವೀರೇಶ್ ವಿಕ್ಟರ್ ಮೋರಸ್ ಧರ್ಮಗುರು ತೀರ್ಥಹಳ್ಳಿ ಧರ್ಮಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.