
ಕ್ರಿಸ್‌ಮಸ್ ಸಂಭ್ರಮದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ದೀಪಾಲಂಕಾರಗೊಂಡ ನೋಟ
ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ಶಿವಮೊಗ್ಗ: 2025, ಇದು ಕ್ರಿಸ್ತರು ಹುಟ್ಟಿದ ಜ್ಯುಬಿಲಿ ವರ್ಷವೆಂಬ ಶ್ರೇಯ. ಹೀಗಾಗಿ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯಕ್ಕೆ ಈ ಬಾರಿಯ ಕ್ರಿಸ್‌ಮಸ್ ಆಚರಣೆ ವಿಶೇಷವೆನಿಸಿದೆ. ಅದಕ್ಕೆ ಇಂಬು ನೀಡುವಂತೆ ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಹಬ್ಬದ ಖುಷಿ ವಾರದ ಮೊದಲೇ ಗರಿಗೆದರಿತ್ತು.
‘ವೈರಿಗಳನ್ನೂ ಪ್ರೀತಿಸಿ, ನಿಮ್ಮನ್ನು ಹಿಂಸಿಸುವವರಿಗೊಸ್ಕರವೂ ಪ್ರಾರ್ಥಿಸಿ, ದೇವರ ಪ್ರೀತಿಯನ್ನು ಮನುಷ್ಯರಲ್ಲಿ ಕಾಣಿ. ಪ್ರೀತಿ, ಕ್ಷಮೆ, ಕರುಣೆ, ತ್ಯಾಗ, ನ್ಯಾಯ ಇವು ಎಲ್ಲದಕ್ಕಿಂತಲೂ ದೊಡ್ಡವು...’ ಎಂದು ಮನುಕುಲಕ್ಕೆ ಸಂದೇಶ ನೀಡಿದವರು ಏಸುಕ್ರಿಸ್ತರು. ಅವರ ಜನ್ಮದಿನದ ಸ್ಮರಣೆ ‘ಕ್ರಿಸ್‌ಮಸ್’ ಆಚರಣೆ ಮೂಲಕ ಗುರುವಾರ ನಡೆಯಲಿದೆ. ಜೊತೆಗೆ ಜುಬಿಲಿ ವರ್ಷದ ಈ ವಿಶೇಷ ವನ್ನು ‘ಭರವಸೆಯ ವರ್ಷ’ ಆಗಿ ಕ್ರೈಸ್ತ ಸಮುದಾಯ ಆಚರಿಸುತ್ತಿದೆ.
ಮಾಗಿಯ ಚುಮು ಚುಮು ಚಳಿಯ ನಡುವೆಯೂ ‘ಕ್ರಿಸ್‌ಮಸ್’ ಆಚರಣೆಗೆ ಭರದ ಸಿದ್ಧತೆ ನಡೆಸಿದೆ. ಶಿವಮೊಗ್ಗ–ಭದ್ರಾವತಿ ಅವಳಿ ನಗರ ಸೇರಿದಂತೆ ಮಲೆನಾಡಿನ ಎಲ್ಲ ಚರ್ಚ್‌ಗಳಲ್ಲೂ ಬುಧವಾರ ರಾತ್ರಿಯೇ ವಿಶೇಷ ಪೂಜೆಯೊಂದಿಗೆ ಕ್ರಿಸ್‌ಮಸ್ ಆಚರಣೆಗೆ ವಿದ್ಯುಕ್ತ ಚಾಲನೆ ದೊರೆತಿದೆ. ಶಿವಮೊಗ್ಗದ ಬಿ.ಎಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್, ಶರಾವತಿ ನಗರದ ಇನ್‌ಫೆಂಟ್ ಜೀಸಸ್ ಚರ್ಚ್, ಗೋಪಾಳದ ಗುಡ್ ಶೆಫರ್ಡ್ ಚರ್ಚ್, ರಾಗಿಗುಡ್ಡದ ಬಳಿಯ ಶಾಂತಿನಗರದ ಸೇಂಟ್ ಅಂಥೋನಿ ದೇವಾಲಯ, ಸಿಎಸ್‌ಐ ಚರ್ಚ್‌ಗಳು ಕ್ರಿಸ್‌ಮಸ್ ಅಂಗವಾಗಿ ವಿಶೇಷವಾಗಿ ಅಲಂಕೃತಗೊಂಡಿದ್ದವು.
ಏಸುಕ್ರಿಸ್ತರ ಜನನದ ಸಂದೇಶವಾಗಿ ಬಣ್ಣ ಬಣ್ಣದ ನಕ್ಷತ್ರಗಳು ಕ್ರೈಸ್ತ ಸಮುದಾಯದವರ ಮನೆ, ಚರ್ಚ್, ಪ್ರಾರ್ಥನಾ ಮಂದಿರಗಳ ಮಾಡನ್ನು ಅಲಂಕರಿಸಿವೆ. ವಿದ್ಯುತ್ ದೀಪಗಳ ಅಲಂಕಾರ ಗಮನ ಸೆಳೆದವು. ಚರ್ಚ್‌ಗಳಲ್ಲಿ ರಾತ್ರಿ ಕ್ರಿಸ್‌ಮಸ್ ಕ್ಯಾರಲ್ಸ್ (ಹರ್ಷ ಗೀತೆಗಳು) ನಂತರ ವಿಶೇಷ ಪೂಜೆ ಆರಂಭವಾಯಿತು. ತಡರಾತ್ರಿ ಧಾರ್ಮಿಕ ಪ್ರಕ್ರಿಯೆ ಮುಕ್ತಾಯವಾಯಿತು. ಈ ವೇಳೆ ಏಸುಕ್ರಿಸ್ತರ ಜನ್ಮದ ಕ್ಷಣ ಮತ್ತು ಸಂದೇಶಗಳು ಹರ್ಷಗೀತೆಗಳ ಮೂಲಕ ಪ್ರಕಟಗೊಂಡವು.
ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿರುವ ಸಿಎಸ್‌ಐ (ಚರ್ಚ್ ಆಫ್ ಸೌತ್ ಇಂಡಿಯಾ) ಸಂತ ಥಾಮಸ್ ದೇವಾಲಯಕ್ಕೆ ಕನ್ನಡದ ಚರ್ಚ್ ಎಂಬ ಗರಿಮೆ ಇದೆ. ಇಲ್ಲಿ ಕ್ರಿಸ್ತರ ಬೋಧನೆ, ಆರಾಧನೆ, ಪ್ರಾರ್ಥನೆ ಎಲ್ಲವೂ ಕನ್ನಡದಲ್ಲಿಯೇ ನಡೆಯುವುದು ವಿಶೇಷ. ಕ್ರಿಸ್‌ಮಸ್ ಪ್ರಾರ್ಥನೆಗೆ ಶಿವಮೊಗ್ಗದ ಎಲ್ಲಾ ಭಾಷಿಕರೂ ಬರುತ್ತಾರೆ. ಆದರೆ, ಅಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ ಮಾಡಲಾಗುತ್ತದೆ. ಈ ವೇಳೆ ಸಮುದಾಯದವರಿಗೆ ಕೇಕ್, ಹಣ್ಣು, ಖರ್ಜೂರವನ್ನು ಈ ವರ್ಷದಿಂದ ಉಡುಗೊರೆಯಾಗಿ ನೀಡಲಾಗುತ್ತದೆ.
ಏಸುಕ್ರಿಸ್ತರ ಹುಟ್ಟುಹಬ್ಬಕ್ಕೆ ಈಗ 2025ರ ಜ್ಯುಬಿಲಿ ವರ್ಷಗಳ ಸಂಭ್ರಮ. ಅಂಚಿನಲ್ಲಿರುವ ಜನರ ಹಿತಕ್ಕೆ ಪ್ರಾರ್ಥಿಸಿ ಅವರ ಬದುಕಿಗೆ ಭರವಸೆ ತುಂಬುವ ನಿಟ್ಟಿನಲ್ಲಿ ಪರಸ್ಪರ ಅನ್ಯೋನ್ಯತೆ ಸಹಬಾಳ್ವೆ ಸಹಭಾಗಿತ್ವದಿಂದ ಬದುಕುವ ಆಶಯದಿಂದ ಈ ಬಾರಿಯ ಕ್ರಿಸ್‌ಮಸ್ ಆಚರಿಸುತ್ತಿದ್ದೇವೆ.ಫಾದರ್ ಸ್ಟ್ಯಾನಿ ಡಿಸೋಜಾ ಧರ್ಮಗುರು ಸೇಕ್ರೆಡ್ ಹಾರ್ಟ್ ಚರ್ಚ್ ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.