
ಶಿಕಾರಿಪುರ (ಶಿವಮೊಗ್ಗ): ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ತಾಲ್ಲೂಕಿನ ಚುರ್ಚಿಗುಂಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅತಿಥಿಗಳಾಗಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದಾರೆ.
ನೀತಿ ಆಯೋಗ ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಈ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಎಂ.ಎಸ್. ಯಶವಂತ್ ಹಾಗೂ ಶಂಕರ್ ವಿಜೇತರಾಗಿ ಆಯ್ಕೆಯಾಗಿದ್ದಾರೆ.
ನೀತಿ ಆಯೋಗದ ಅಟಲ್ ಇನ್ನೊವೇಷನ್ ಮಿಷನ್ (ಎಐಎಂ) ಮೂಲಕ ದೇಶದ 10,000 ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ‘ಅಟಲ್ ಟಿಂಕರಿಂಗ್ ಲ್ಯಾಬ್’ ಅಳವಡಿಸಲಾಗಿದೆ. ಲ್ಯಾಬ್‌ನಲ್ಲಿ ಕೈಗೊಳ್ಳುವ ಪ್ರಾಜೆಕ್ಟ್‌ನ ಗುಣಮಟ್ಟದ ಆಧಾರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಶಾಲೆಯಲ್ಲಿರುವ ಲ್ಯಾಬ್ ಬಳಸಿಕೊಂಡು ವಿದ್ಯಾರ್ಥಿಗಳು ‘ಬಹು ಉಪಯೋಗಿ ಕೃಷಿ ಸಲಕರಣೆ ಯಂತ್ರ’ ಸಿದ್ಧಪಡಿಸಿದ್ದಾರೆ. ಒಂದೇ ಯಂತ್ರದಲ್ಲಿ ಬಿತ್ತನೆ, ಬೆಳೆಗಳಿಗೆ ಔಷಧಿ ಸಿಂಪಡಣೆ, ಹನಿ ನೀರಾವರಿಗೆ ಅನುಕೂಲ ಕಲ್ಪಿಸುವುದೂ ಸೇರಿದಂತೆ ಒಟ್ಟು 12 ಪರಿಕರಗಳನ್ನು ಅಳವಡಿಸಿದ್ದಾರೆ. 10,000 ಪ್ರಾಜೆಕ್ಟ್‌ಗಳ ಪೈಕಿ ಮೊದಲ ಹಂತದಲ್ಲಿ 1,000 ಶಾಲೆಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಚುರ್ಚಿಗುಂಡಿ ಶಾಲೆ 86ನೇ ಸ್ಥಾನ ಪಡೆದಿತ್ತು.
ವಿದ್ಯಾರ್ಥಿಗಳೊಂದಿಗೆ, ತರಬೇತುದಾರ ಎಂ.ವಿ.ತೇಜಸ್ವಿಕುಮಾರ್, ಪ್ರಾಚಾರ್ಯೆ ಸುಮಾ ಅವರು ವಿಮಾನದಲ್ಲಿ ನವದೆಹಲಿಗೆ ಹೋಗಲಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಯ ಜೊತೆಗೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಡೆಸಲಿರುವ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಚುರ್ಚಿಗುಂಡಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಅನುಕರಣೀಯ. ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಸದ್ಬಳಕೆ ಮಾಡಿಕೊಂಡಿರುವುದು ಖುಷಿ ನೀಡಿದೆ. ಜಿಲ್ಲೆಯ ಇನ್ನಷ್ಟು ಶಾಲೆಗಳಿಗೆ ಲ್ಯಾಬ್ ವಿಸ್ತರಿಸುವ ಪ್ರಯತ್ನ ಮಾಡಲಾಗುವುದು.-ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ನಮ್ಮ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಗುಣಮಟ್ಟದಲ್ಲಿ ಜಿಲ್ಲೆಯಲ್ಲೇ 3ನೇ ಸ್ಥಾನ ಪಡೆದಿದೆ. ನಮ್ಮವಿದ್ಯಾರ್ಥಿಗಳು ಗಣರಾಜ್ಯೊತ್ಸವ ಪರೇಡ್‌ಗೆ ಅತಿಥಿಗಳಾಗಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ-ಸುಮಾ, ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಚುರ್ಚಿಗುಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.