ADVERTISEMENT

ಹವಾಮಾನ ವೈಪರೀತ್ಯ; ಪರಿಹಾರದ ಚಿಂತನೆ ಅಗತ್ಯ- ವಿ.ವಿ. ಕುಲಸಚಿವರಾದ ಜಿ.ಅನುರಾಧಾ

ಅರಿವು ಕಾರ್ಯಕ್ರಮದಲ್ಲಿ ಕುವೆಂಪು ವಿ.ವಿ. ಕುಲಸಚಿವರಾದ ಜಿ.ಅನುರಾಧಾ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:19 IST
Last Updated 15 ಜನವರಿ 2022, 8:19 IST
ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ (ಆಡಳಿತ) ಜಿ. ಅನುರಾಧ ಉದ್ಘಾಟಿಸಿದರು.
ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ (ಆಡಳಿತ) ಜಿ. ಅನುರಾಧ ಉದ್ಘಾಟಿಸಿದರು.   

ಶಿವಮೊಗ್ಗ: ಬದಲಿ ಇಂಧನ, ಸೋಲಾರ್ ಬಳಕೆ, ಮಳೆ ನೀರು ಸಂಗ್ರಹ ಸೇರಿ ಪರಿಸರ ಸಂರಕ್ಷಣೆಯ ಹೊಸ ವಿಧಾನಗಳ ಬಗ್ಗೆ ಯುವಜನರು ಚಿಂತಿಸಿ, ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ (ಆಡಳಿತ) ಜಿ. ಅನುರಾಧಾ ಹೇಳಿದರು.

ಸ್ಮಾರ್ಟ್‌ ಸಿಟಿ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗ, ಸಹ್ಯಾದ್ರಿ ವಾಣಿಜ್ಯ ಕಾಲೇಜು ಹಾಗೂ ಎನ್‍ಎಸ್‍ಎಸ್ ಸಹಯೋಗದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಹವಾಮಾನ ಬದಲಾವಣೆ ಅರಿವು’ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಹವಾಮಾನ ಬದಲಾವಣೆ ನಿಧಾನಗತಿಯಲ್ಲಿ ಆಗುತ್ತಿತ್ತು. ಅದರರ್ಥ ಪರಿಸರ ಮಾಲಿನ್ಯ ಕಡಿಮೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಬಹಳ ವೇಗವಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ತಾಪಮಾನ ಹೆಚ್ಚುತ್ತಿದೆ. ಇದು ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಅಭಿವೃದ್ಧಿ ಮತ್ತು ನಗರೀಕರಣದ ಪರಿಣಾಮ. ಪ್ರಾಕೃತಿಕ ವೈಪರೀತ್ಯಕ್ಕೆ ಕಾರಣಗಳೇನು? ಇದಕ್ಕೆ ಪರಿಹಾರೋಪಾಯಗಳೇನು ಎಂದು ಯುವಕರು ವಿಮರ್ಶಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಸ್ಮಾರ್ಟ್‌ ಸಿಟಿ ಕಾರ್ಯದರ್ಶಿ ಶರತ್‍ಬಾಬು ಮಾತನಾಡಿ, ‘ಇದು ಭಾರತ ಸರ್ಕಾರದ ಕಾರ್ಯಕ್ರಮ. ಸ್ಮಾರ್ಟ್‌ ಸಿಟಿ ಯೋಜನೆಯ ನಗರದ ಮೂಲಸೌಕರ್ಯವನ್ನು ಉತ್ತಮಪಡಿಸುವುದಾಗಿದ್ದು, ಪರಿಸರ ಸ್ನೇಹಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಸ್ಮಾರ್ಟ್‌ ಸಿಟಿಯ ಎಲ್ಲ ಯೋಜನೆಗಳಲ್ಲಿ ಪರಿಸರಸ್ನೇಹಿ ಕಾಳಜಿ ಇದೆ’ ಎಂದರು.

‘₹ 1 ಸಾವಿರ ಕೋಟಿಯ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಶೇ 25 ಭಾಗವನ್ನು ನಗರ ಹಸಿರೀಕರಣಕ್ಕೆ ವ್ಯಯಿಸಲಾಗುವುದು. ಉದ್ಯಾನ, ಹಸಿರು ಪ್ರದೇಶಗಳು ಹೀಗೆ ಜವಾಬ್ದಾರಿಯುತವಾಗಿ ಕಾಲು ಭಾಗ ಅನುದಾನವನ್ನು ಬಳಸಲಾಗುವುದು. ನಗರದಲ್ಲಿ ಪರಿಸರ ಸಂರಕ್ಷಣೆ ಕೇಂದ್ರೀಕೃತವಾದ 14 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 10 ಕಾಮಗಾರಿಗಳು ಪೂರ್ಣಗೊಂಡಿವೆ. ಎರಡು ಕಾಮಗಾರಿಗಳು ಪ್ರಗತಿಯಲ್ಲಿವೆ. ಹಸಿರು ನಗರೀಕರಣ ಯೋಜನೆಯಡಿ ನಗರದಾದ್ಯಂತ 8,630 ಸಸಿಗಳನ್ನು ನೆಡಲಾಗುತ್ತಿದೆ.ಮೂರು ವರ್ಷಗಳ ಕಾಲ ಯೋಜನೆಯಡಿ ಇವುಗಳನ್ನು ನಿರ್ವಹಣೆ ಮಾಡಲಾಗುವುದು. ನಗರದ 19 ಕಡೆಗಳಲ್ಲಿ ಪಾರ್ಕ್‌ಗಳ ಅಭಿವೃದ್ದಿ ಮಾಡಲಾಗುತ್ತಿದ್ದು, 12,428 ಮರಗಳನ್ನು ಸ್ಮಾರ್ಟ್‌ ಸಿಟಿ ನಿರ್ವಹಣೆ ಮಾಡುತ್ತಿದೆ’ ಎಂದು ಹೇಳಿದರು.

ಸ್ಮಾರ್ಟ್‌ ಸಿಟಿ ಮುಖ್ಯ ದತ್ತಾಂಶಗಳ ಅಧಿಕಾರಿ ಬಿ.ವರ್ಗೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈದೇಹಿ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಹಾಗೂ ಸ್ಮಾರ್ಟ್‌ ಸಿಟಿಯ ಎಜಿಎಂ ರತ್ನಾಕರ್ ಮಾತನಾಡಿದರು. ಜೆಎನ್‍ಎನ್‍ಸಿಸಿ ವಿಶ್ರಾಂತ ಪ್ರಾಚಾರ್ಯ ಪ್ರೊ.ಶ್ರೀಪತಿ, ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಶುಭಾ ಮರವಂತೆ ನಿರೂಪಿಸಿದರು. ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಪರಿಸರ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.