ಬಲೂನು ಹಾರಿಬಿಟ್ಟು ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಶಿವಮೊಗ್ಗ: ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಂತೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಶೀಘ್ರ ಪ್ರಕ್ರಿಯೆ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೌಕರರ ಪರವಾಗಿ ಮನವಿ ಸಲ್ಲಿಸುವೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಹೀಲಿಯಂ ಅನಿಲ ತುಂಬಿದ ಬೃಹತ್ ಬಲೂನು ಹಾರಿಸುವ ಮೂಲಕ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ರೂಪಿಸಿದ್ದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಈಗಿನ ಹೊಸ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್) ಬದಲಿಗೆ ಒಪಿಎಸ್ ಜಾರಿಗೊಳಿಸುವ ಭರವಸೆ ನೀಡಲಾಗಿತ್ತು. ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸುತ್ತಿದೆ. ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿದ್ದ ನನಗೂ ಒಪಿಎಸ್ ಜಾರಿ ವಿಚಾರದಲ್ಲಿ ಹೊಣೆಗಾರಿಕೆ ಇದೆ. ಮುಖ್ಯಮಂತ್ರಿ ಅವರಿಗೆ ನಿಮ್ಮ (ಸರ್ಕಾರಿ ನೌಕರರ) ಪರವಾಗಿ ಮನವಿ ಮಾಡುವೆ ಎಂದರು.
ಈ ವೇಳೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ್ ಹಾಜರಿದ್ದರು.
ಹವಾಮಾನ ವೈಪರಿತ್ಯ, ಸಿಎಂ ಗೈರು: ಶಿವಮೊಗ್ಗದಲ್ಲಿ ಮಳೆ ಆಗುತ್ತಿದ್ದು, ಹವಾಮಾನ ವೈಪರಿತ್ಯದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿವಮೊಗ್ಗ ಪ್ರವಾಸವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಂಜೆ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಬೇಕಿತ್ತು. ಜೊತೆಗೆ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಸಿಎಂ ಹಾಗೂ ಸಚಿವರ ಗೈರು ಹಾಜರಿಯಲ್ಲಿಯೇ ಕಾರ್ಯಕ್ರಮ ಆರಂಭಗೊಂಡಿವೆ.
ಮೇ 20ರವರೆಗೆ ಮೂರು ದಿನ ನಡೆಯುವ ಸರ್ಕಾರಿ ನೌಕರರ. ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ 15 ಸಾವಿರ ನೌಕರರು ಪಾಲ್ಗೊಳ್ಳಲಿದ್ದು, ನೋಂದಣಿ ಕಾರ್ಯ ಬೆಳಿಗ್ಗೆಯಿಂದಲೇ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.