ADVERTISEMENT

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಮಲೆನಾಡು ಸಜ್ಜು

ಇಂದಿನಿಂದ ಮೂರು ದಿನ ವಿವಿಧ ಕಾರ್ಯಕ್ರಮಗಳು, ಗಣ್ಯರು ಭಾಗಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 4:19 IST
Last Updated 31 ಜನವರಿ 2021, 4:19 IST
ಶಿವಮೊಗ್ಗ ಗೋಪಿಶೆಟ್ಟಿ ಕೊಪ್ಪದಲ್ಲಿರುವ ಸಾಹಿತ್ಯ ಭವನ.
ಶಿವಮೊಗ್ಗ ಗೋಪಿಶೆಟ್ಟಿ ಕೊಪ್ಪದಲ್ಲಿರುವ ಸಾಹಿತ್ಯ ಭವನ.   

ಶಿವಮೊಗ್ಗ: 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಎಳೆಯಲು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಸಜ್ಜುಗೊಂಡಿದೆ.

ಇಲ್ಲಿನ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಭವನದಲ್ಲಿ ಭಾನುವಾರದಿಂದ (ಜನವರಿ 31ರಿಂದ ಫೆಬ್ರುವರಿ 2ರ ವರೆಗೆ) ಮೂರು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಬಾರಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ.ವಿಜಯಾದೇವಿ ಅವರು ವಹಿಸಲಿದ್ದಾರೆ.

ಸಮ್ಮೇಳನದ ಮೊದಲ ದಿನ ಏನು?: ಸಮ್ಮೇಳನ ನಡೆಯುವ ಜಾಗಕ್ಕೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಹೆಸರಿಡಲಾಗಿದೆ. ಸಮ್ಮೇಳನ ಮೊದಲ ದಿನವಾದ ಭಾನುವಾರ ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಗೋಪಾಳದ ಬಸ್ ನಿಲ್ದಾಣದ ಬಳಿ ಇರುವ ದೇವಸ್ಥಾನದಿಂದ ಸರ್ವಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದ್ದು, ಸಾಹಿತ್ಯ ಭವನ ತಲುಪಲಿದೆ. ಬೆಳಿಗ್ಗೆ 10.30ಕ್ಕೆ ಡಾ.ಬಿ.ವಿ. ವಸಂತ ಕುಮಾರ್ ಸಮ್ಮೇಳನವನ್ನು ಉದ್ಘಾಟಿಸುವರು.

ADVERTISEMENT

ಸಮ್ಮೇಳನದಲ್ಲಿ ಒಟ್ಟು 11 ಗೋಷ್ಠಿಗಳು: ಸಮ್ಮೇಳನದ ಸರ್ವಾಧ್ಯಕ್ಷರ ಬದುಕ ಬರಹ, ಕನ್ನಡ ಸಾಹಿತ್ಯ ಪರಂಪರೆ, ಸಂವಾದ, ಜಿಲ್ಲೆಯ ತೆರೆಮರೆಯ ಹಿರಿಯ ಕೃತಿಕಾರರ ಕೃತಿ ದರ್ಶನ, ತುಂಗಾ ಹರಿವಿನಲ್ಲಿ ನೆಲೆಯೂರುತ್ತಿರುವ ಕೃತಿಕಾರರು, ಕೊರೊನಾ ತಂದ ಆತಂಕ, ‘ನಮ್ಮ ಜಿಲ್ಲೆ ನಮ್ಮ ಹೆಮ್ಮೆ’ ಸೇರಿ ಒಟ್ಟು 11 ಗೋಷ್ಠಿಗಳು ನಡೆಯಲಿವೆ.

ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷರಿಗೆ ಒಡಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ 700 ಜನ ಶಿಕ್ಷಕರು ಆನ್‌ಲೈನ್‌ ಮೂಲಕ ಹೆಸರು ನೋಂದಣಿ ಮಾಡಿದ್ದಾರೆ. ಶಾಲಾ ಶಿಕ್ಷಕರಿಗೆ ರಜೆ ಸಹಿತ ವೇತನ ನೀಡಲಾಗಿದ್ದು, ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರು ಕಡ್ಡಾಯವಾಗಿ ನೋಂದಣಿ ಪುಸ್ತಕದಲ್ಲಿ ಸಹಿ ಹಾಕಬೇಕು. ಕಾರ್ಯಕ್ರಮ ನಂತರ ಅವರಿಗೆ ಒಡಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಕಸಪಾ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಮ್ಮೇಳನಕ್ಕೆ ₹ 6 ಲಕ್ಷ ಅನುದಾನ: ಸಮ್ಮೇಳನಕ್ಕೆ ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ₹ 5 ಲಕ್ಷ ಹಾಗೂ ಮಹಾನಗರ ಪಾಲಿಕೆಯು ₹ 1 ಲಕ್ಷ ಸೇರಿ ಒಟ್ಟು ₹ 6 ಲಕ್ಷ ಅನುದಾನ ನೀಡಲಾಗಿದೆ. ಇದರ ಜೊತೆಗೆ ದಾನಿಗಳಿಂದ ₹ 15 ಸಾವಿರ ಸಂಗ್ರಹವಾಗಿದೆ ಎಂದು ಡಿ.ಬಿ. ಶಂಕರಪ್ಪ ತಿಳಿಸಿದರು.

ಮಳಿಗೆ 7: ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಒಟ್ಟು 7 ಮಳಿಗೆಗಳನ್ನು ಸಜ್ಜು ಗೊಳಿಸಲಾಗಿದೆ.

5 ಕಲಾ ತಂಡಗಳು: ಬೆಳ್ಳಿರಥದಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಒಟ್ಟು 5 ಕಲಾ ತಂಡಗಳು ಭಾಗವಹಿಸಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳುಕುಣಿತ, ಓಲಗ ತಂಡಗಳು ಹಾಗೂ ವೀರಗಾಸೆ, ಭಜನೆ ತಂಡಗಳೂ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.