ADVERTISEMENT

ಯಡಿಯೂರಪ್ಪ, ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಸಂಪುಟ ಸಭೆಯಲ್ಲೇ ಬಗೆಹರಿಸಿಕೊಳ್ಳಬೇಕಾದ ವಿಷಯ ಬೀದಿಗೆ: ಸುಂದರೇಶ್ ಕಳವಳ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 11:17 IST
Last Updated 6 ಏಪ್ರಿಲ್ 2021, 11:17 IST
ಎಚ್‌.ಎಸ್‌.ಸುಂದರೇಶ್
ಎಚ್‌.ಎಸ್‌.ಸುಂದರೇಶ್   

ಶಿವಮೊಗ್ಗ: ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಸಚಿವರ ಮಧ್ಯೆ ಹೊಂದಾಣಿಕೆ ಇಲ್ಲ. ಸರ್ಕಾರ ನಡೆಸಲು ಸಾಧ್ಯವಾಗದ ಬಿ.ಎಸ್.ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆಗ್ರಹಿಸಿದರು.

ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ವಿರುದ್ಧವೇ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಸಂಪುಟ ಸಭೆಯಲ್ಲೇ ಬಗೆಹರಿಸಿಕೊಳ್ಳಬೇಕಾದ ವಿಷಯ ಬೀದಿಗೆ ತಂದು ನಿಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡಿದ್ದರೆ ದೂರು ಕೊಡುವ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ನಿಮಯದ ಚೌಕಟ್ಟು ಮೀರಿದ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಲ್ಲೂ ಮುಖ್ಯಮಂತ್ರಿ ಅಸಾಯಕರಾಗಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ಅವರದೇ ಪಕ್ಷದ ಬಸನಗೌಡ ಪಾಟೀಲ ಯತ್ನಾಳ್‌ ಪ್ರತಿದಿನ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಹಸ್ತಕ್ಷೇಪದ ವಿರುದ್ಧ ಆರೋಪ ಮಾಡುತ್ತಲೇ ಇದ್ದಾರೆ. ಹಗರಣಗಳ ಸುಳಿವು ನೀಡಿದ್ದಾರೆ. ದೂರು ಹೇಳುತ್ತಿದ್ದಾರೆ. ಇಷ್ಟಾದರೂ ಕೂಡ ಯಡಿಯೂರಪ್ಪ ಮೌನವಾಗಿದ್ದಾರೆ. ಹೀಗೆ ಅವಮಾನ ಸಹಿಸಿಕೊಳ್ಳುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ರಾಜ್ಯದ ಹಿತದ ದೃಷ್ಟಿಯಿಂದ ಒಳ್ಳೆಯದು ಎಂದು ಕುಟುಕಿದರು.

ADVERTISEMENT

ಸಂಪುಟದ ಸದಸ್ಯರ ಮಧ್ಯೆ ನಡೆಯುವ ಕಿತ್ತಾಟದ ಪರಿಣಾಮ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಗೋವಿಂದಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಶ್ರಯ ಮನೆಗಳ ಅಂದಾಜು ಮೊತ್ತವನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಿದ ಪರಿಣಾಮ ಬಡವರಿಗೆ ₹2 ಲಕ್ಷ ಹೊರೆಯಾಗಿದೆ. ಚಆಶ್ರಯ ಮನೆಗಳ ಯೋಜನೆ ಕಾಂಗ್ರೆಸ್ ಕಾಲದಲ್ಲಿ ರೂಪಿಸಲಾಗಿತ್ತು. ಈಗ ಈಶ್ವರಪ್ಪನವರು ತಮ್ಮ ಕನಸು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಸಕ್ಕಿಂತ ಕಡೆ ಎಂದು ಹೇಳಿದ್ದಾರೆ. ಪಾಪ ಅವರಿಗೆ ಗೊತ್ತಿಲ್ಲ, ಅವರ ಪಕ್ಷವೇ ಅವರನ್ನು ಕಸಕ್ಕಿಂತ ಕಡೆಯಾಗಿಸಿದೆ. ಮೂಲೆಗುಂಪು ಮಾಡಿದ್ದಾರೆ. ಎಲ್ಲರ ಮೇಲೂ ಸುಮ್ಮನೆ ಕೂಗಾಡುತ್ತಾರೆ. ಸಿದ್ದರಾಮಯ್ಯಗೆ ಇರುವ ಸ್ಥಾನಮಾನ ಈಶ್ವರಪ್ಪಗೆ ಯಾವ ಕಾಲಕ್ಕೂ ಸಿಗುವುದಿಲ್ಲ. ಅವರ ಪಕ್ಷದ ಶಾಸಕರೇ ಸಹಿ ಸಂಗ್ರಹದ ಮೂಲಕ ತಿರುಗೇಟು ನೀಡಿದ್ದಾರೆ. ಹಾಗಾಗಿ, ಈಶ್ವರಪ್ಪ ಹತಾಶರಾಗಿದ್ದಾರೆ ಎಂದು ಕನಿಕರ ವ್ಯಕ್ತಪಡಿಸಿದರು.

ರೆಫೆಲ್ ಯುದ್ದ ವಿಮಾನ ಖರೀದಿ ಹಗರಣ ಮತ್ತೆ ತಿರುವುಗಳು ಪಡೆದಿದೆ. ರಾಹುಲ್ ಗಾಂಧಿ ಅವರ ಆರೋಪಗಳು ಸತ್ಯವಾಗುತ್ತಿವೆ. ದೆಹಲಿಯ ಕೆಲವು ಪತ್ರಿಕೆಗಳು ಈ ಕುರಿತು ವರದಿ ಪ್ರಕಟಿಸಿವೆ. ಪ್ರಧಾನಿ ಈಗಲಾದರೂ ಮೌನ ಮುರಿದು ಹೇಳಿಕೆ ನೀಡಬೇಕು. ಇಲ್ವೇ ತಪ್ಪು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ, ಮೆಹಕ್ ಷರೀಫ್, ಪಕ್ಷದ ಮುಖಂಡರಾದ ಚಂದ್ರಭೂಪಾಲ್, ಪ್ರವೀಣ್, ಆರ್.ಸಿ.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.