ಶಿವಮೊಗ್ಗ: ‘ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೇರೆಯವರ ಮನೆ ಹಾಳು ಮಾಡಿದ್ದ ಕಾಂಗ್ರೆಸ್, ಈಗ ತನ್ನ ಮನೆ ಕಾಪಾಡಿಕೊಳ್ಳಲು ಪ್ರಯತ್ನ ನಡೆಸುವ ಸ್ಥಿತಿಗೆ ಬಂದಿದೆ. 75 ವರ್ಷಗಳ ಹಿಂದಿನ ಕಾಂಗ್ರೆಸ್ ಪಕ್ಷ ಈಗ ಉಳಿದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದರು.
ರಾಷ್ಟ್ರೋತ್ಥಾನ ಬಳಗದಿಂದ ಇಲ್ಲಿನ ದ್ವಾರಕಾ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ದೇಶಕ್ಕೆ ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷದ ಸ್ಮರಣೆ ಹಾಗೂ ಮರುಮುದ್ರಿತ ‘ಭುಗಿಲು’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುರ್ತುಪರಿಸ್ಥಿತಿ ಕಾಲದ ದೇಶದ ಕರಾಳ ಸತ್ಯ ಅರ್ಥೈಸುವ ಕಾರ್ಯವನ್ನು ಶಾಲೆಗಳು ಮಾಡಲಿಲ್ಲ. ಇಲ್ಲಿ ಸ್ಥಳೀಯವಾಗಿ ಬೆಳೆಯುವ ಅಡಿಕೆಯ ಬಗ್ಗೆ ಮಾಹಿತಿ ನೀಡದ ಪಠ್ಯ ಕ್ರಮ, ಅಮೆರಿಕಾದ ಮೆಕ್ಕೆಜೋಳದ ಬಗ್ಗೆ ಜ್ಞಾನ ಪ್ರಸರಣ ಮಾಡುತ್ತಿತ್ತು. ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಬೆಳೆದು ಬಂದಿದ್ದೇವೆ. ಇದು ದೇಶದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ‘ಪರಕೀಯರ ದಬ್ಬಾಳಿಕೆ ನಡುವೆ ದೇಶದ ಮೂಲ ಸಂಸ್ಕೃತಿ, ನಡವಳಿಕೆ ಮರೆಯಾಗಿಲ್ಲ. ಭಾರತದ ಈ ಮಣ್ಣಿನಲ್ಲಿಯೇ ವಿಶೇಷ ಗುಣವಿದೆ. ಇದರ ಮೇಲೆ ಯಾವುದೇ ರೀತಿಯ ಅಘಾತವಾದರೂ ಎದುರಿಸಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವನ್ನು ಇಲ್ಲಿಯ ಜನರು ಹೊಂದಿದ್ದಾರೆ. ಈಗಿನ ಪೀಳಿಗೆಗೆ ದೇಶಕ್ಕೆ ಹೇರಿದ್ದ ತುರ್ತುಸ್ಥಿತಿ ಬಗ್ಗೆ ಅರಿವಿಲ್ಲ. ಅಂದು ತ್ರಿವರ್ಣಧ್ವಜ ಹಿಡಿದು ದೇಶದ ಪರ ಘೋಷಣೆ ಕೂಗಿದ್ದಕ್ಕೆ ರಾಷ್ಟ್ರದ್ರೋಹಿ ಪಟ್ಟಕಟ್ಟಿ ಜೈಲಿಗೆ ಹಾಕಿದ್ದರು. ಇದರ ಪರಿಣಾಮ ಇಂದಿರಾಗಾಂಧಿ ಅವರನ್ನು ಜನರು ಸೋಲಿಸಿದರು’ ಎಂದು ಹೇಳಿದರು.
‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಆರ್‌ಎಸ್ಎಸ್ ವಿರುದ್ಧ ಆಕ್ರೋಶ ಇತ್ತು. ಆದರೆ, ಇಂದು ಅದೇ ಸಂಘಟನೆಯವರು ಎಲ್ಲ ರಂಗದಲ್ಲಿ ಇದ್ದಾರೆ. ಇಂದಿರಾಗಾಂಧಿ ಅವರನ್ನು ಜನರು ಸೋಲಿಸಿದ್ದು ಆಶ್ಚರ್ಯ ಹಾಗೂ ಅವರಿಗೆ ಭಾರತದ ಪರ ಪ್ರೀತಿ ಇತ್ತೇ ಎಂಬ ಪ್ರಶ್ನೆ ಮೂಡುತ್ತದೆ’ ಎಂದು ಚಿಂತಕ ಪ್ರಕಾಶ್ ಬೆಳವಾಡಿ ಛೇಡಿಸಿದರು.
ರಾಷ್ಟ್ರೋತ್ಥಾನ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸುಧೀಂದ್ರ ಮಾತನಾಡಿದರು. ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ್, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಕೆ.ಬಿ.ಅಶೋಕ ನಾಯ್ಕ್, ಆರ್.ಕೆ.ಸಿದ್ರಾಮಣ್ಣ, ಮುಖಂಡರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಗೋವಿಂದ ನಾಯರ್ ಇದ್ದರು.
50 ವರ್ಷದ ಹಿಂದೆ ಹೊರ ತರಲಾದ ಪುಸ್ತಕವನ್ನು ಮರುಮುದ್ರಣ ಮಾಡಲಾಗಿದೆ. ಇಂದಿನ ಯುವಜನರು ‘ಭುಗಿಲು’ ಪುಸ್ತಕವನ್ನು ತಪ್ಪದೇ ಓದಬೇಕುಡಿ.ಎಚ್.ಶಂಕರಮೂರ್ತಿ ಮಾಜಿ ಸಭಾಪತಿ
‘ನಿರಂಕುಶ ಆಡಳಿತಕ್ಕೆ ಇಂದಿರಾ ಹೋರಾಟ’
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನೇಕರು ಅನಿವಾರ್ಯ ಕಾರಣಕ್ಕೆ ಸರ್ಕಾರದ ಪರ ಕೆಲಸ ಮಾಡಿದ್ದರು. ಆಗ ದೇಶದ ಜನಜೀವನ ಮತ್ತು ವೈಚಾರಿಕತೆಯನ್ನು ಕೈ ವಶ ಮಾಡಿಕೊಳ್ಳುವ ಆತುರದಲ್ಲಿ ನಿರಂಕುಶ ಆಡಳಿತ ವ್ಯವಸ್ಥೆ ಜಾರಿ ತರಲು ಇಂದಿರಾಗಾಂಧಿ ಹೊರಟಿದ್ದರು’ ಎಂದು ಬಿ.ಎಲ್.ಸಂತೋಷ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.