ADVERTISEMENT

ಜನಾಕ್ರೋಶ ಸಮಾವೇಶ: ರಾಜ್ಯದ ಎಲ್ಲ ಠಾಣೆಗಳಿಗೂ ಕಾಂಗ್ರೆಸ್ ಮುತ್ತಿಗೆ -ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 16:20 IST
Last Updated 13 ಮಾರ್ಚ್ 2021, 16:20 IST
ಶಿವಮೊಗ್ಗ ಬಿ.ಎಚ್‌.ರಸ್ತೆಯಲ್ಲಿ ಶನಿವಾರ ನಡೆದ ಜನಾಕ್ರೋಶ ಪ್ರತಿಭಟನಾ ರ‍್ಯಾಲಿ.
ಶಿವಮೊಗ್ಗ ಬಿ.ಎಚ್‌.ರಸ್ತೆಯಲ್ಲಿ ಶನಿವಾರ ನಡೆದ ಜನಾಕ್ರೋಶ ಪ್ರತಿಭಟನಾ ರ‍್ಯಾಲಿ.   

ಶಿವಮೊಗ್ಗ: ರಾಜ್ಯದ ಕಾರ್ಯಕರ್ತರು ಮುಖಂಡರ ಮೇಲೆ ಭದ್ರಾವತಿಯಲ್ಲಿ ನಡೆದಂತಹ ಪೊಲೀಸ್‌ ದೌರ್ಜನ್ಯ ಮುಂದುವರಿದರೆ ರಾಜ್ಯದ ಎಲ್ಲಠಾಣೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.

ನಗರದ ಬಿ.ಎಚ್‌.ರಸ್ತೆಯ ಸೈನ್ಸ್‌ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದಶಿವಮೊಗ್ಗ ಚಲೋ–ಜನಾಕ್ರೋಶ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

’ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋಟಿಗಟ್ಟಲೆ ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿದರು. ಲೂಟಿ‌ ಹೊಡೆದು ಆಸ್ತಿ ಮಾಡಿದರು. ಹಾಗಂತ ಅವರೇ ಪೊಲೀಸರಿಗೆ ಸಂಬಳ ಕೊಡುತ್ತಾರಾ? ಸರ್ಕಾರದ ಸಂಬಳ ಪಡೆದವರಿಗೆ ನಾಚಿಕೆಯಾಗಬೇಕು. ಯಡಿಯೂರಪ್ಪ, ಈಶ್ವರಪ್ಪ ಅಥವಾ ಬಿಜೆಪಿ‌ ಕಚೇರಿಯಿಂದ ವೇತನ ನೀಡುವುದಿಲ್ಲ. ಮಾನ, ಮರ್ಯಾದೆ ಇದ್ದವರು ಇಂತಹ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಐಪಿಸಿ ಕಲಂಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದರೆ ಯಾವ ಪೊಲೀಸರೂ ತಡೆಯಲು ಸಾಧ್ಯವಿಲ್ಲ. ಸುಳ್ಳು ಕೇಸ್ ಹಾಕ್ತೀರಾ? ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬೀಕೇರ್ ಫುಲ್’ ಎಂದು ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊರೊನಾ ಸಮಯದಲ್ಲೂ ಸರ್ಕಾರ ಜನರಿಗೆ ಉಪಕಾರ ಮಾಡಲಿಲ್ಲ. ಹಾಸಿಗೆ, ದಿಂಬಿನಲ್ಲೇ ಸಾವಿರಾರು ಕೋಟಿ‌ ಲೂಟಿ ಹೊಡೆದರು. ಅವರ ಮಾತು ಹೇಳದವರನ್ನು ಐಟಿ, ಸಿಬಿಐ, ಇಡಿ ಬಿಟ್ಟು ಹೆದರಿಸಿದರು. ತಮ್ಮನ್ನು ಸಿಗಿಸಲು‌ ಸಂಚು ಮಾಡಿದರು.‌ ಸಮಯ ಬಂದಾಗ ಎಲ್ಲ ಬಿಚ್ಚುತ್ತೇನೆ. ಯಾರಿಗೂ ಹೆದರೋ ಮಗ‌ ಅಲ್ಲ ಈ ಶಿವಕುಮಾರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೇಶ್ವರ, ಕೃಷ್ಣ ಭೈರೇಗೌಡ, ರಾಮಲಿಂಗ ರೆಡ್ಡಿ, ವಿನಯ್‌ಕುಮಾರ್ ಸೊರಕೆ, ಈಶ್ವರ ಖಂಡ್ರೆ ಸೇರದಿಂತೆ ರಾಜ್ಯದ ಹಲವು ಕಾಂಗ್ರೆಸ್‌ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.