ADVERTISEMENT

ಗುಂಡೇಟಿನಿಂದ ಸಾವು ಪ್ರಕರಣ: ಇಬ್ಬರ ಬಂಧನ

ತಗುಲಿದ್ದು ಬೇರೆ ಬಂದೂಕಿನ ಗುಂಡು; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಬೇಟೆಯ ಸತ್ಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 3:04 IST
Last Updated 20 ಸೆಪ್ಟೆಂಬರ್ 2022, 3:04 IST
ಕೀರ್ತಿ
ಕೀರ್ತಿ   

ಶಿವಮೊಗ್ಗ: ಬೆಳೆ ತಿನ್ನಲು ಬರುವ ಕಾಡು ಕೋಣ ಬೆದರಿಸಲು ನಾಡ ಬಂದೂಕಿನೊಂದಿಗೆ ತೋಟಕ್ಕೆ ಹೋದಾಗ ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದರು ಎನ್ನಲಾಗಿದ್ದ ಹೊಸನಗರದ ಅಂಬರೀಷ್‌ (30) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮೃತ ಅಂಬರೀಷ ದೇಹ ಸೇರಿದ್ದ ಗುಂಡುಗಳು ಹಾಗೂ ಮೃತದೇಹದ ಬಳಿ ದೊರೆತಿದ್ದ ನಾಡ ಬಂದೂಕಿನಲ್ಲಿ ದೊರತಿದ್ದ ಗುಂಡುಗಳಿಗೂ ತಾಳೆಯಾಗಿಲ್ಲ ಎಂಬುದು ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಪ್ರಕರಣದ ತನಿಖೆ ನಡೆಸಿರುವ ನಗರ ಠಾಣೆ ಪೊಲೀಸರು ಹೊಸನಗರ ತಾಲ್ಲೂಕು ನೇಗಿಲೋಣಿ ರಾವೆ ಗ್ರಾಮದ ನಿವಾಸಿ ಕೀರ್ತಿ ಬಿನ್ ಚಂದ್ರಶೇಖರ (30) ಮತ್ತು ನಾಗರಾಜ (39) ಎಂಬುವವರನ್ನು ಬಂಧಿಸಿದ್ದಾರೆ.

ADVERTISEMENT

ಅಂಬರೀಷ್ ಜೊತೆ ಅಂದು ರಾತ್ರಿ ತೋಟಕ್ಕೆ ಹೋಗಿದ್ದ ಕೀರ್ತಿಯನ್ನು ವಿಚಾರಣೆಗಗೆ ಒಳಪಡಿಸಿದ್ದು, ಕೀರ್ತಿ ತನ್ನ ಸ್ನೇಹಿತರಾದ ಅಂಬರೀಷ್‌ ಮತ್ತು ನಾಗರಾಜ ಜೊತೆ ಕಾಡಿಗೆ ಶಿಕಾರಿಗೆ ತೆರಳಿದ್ದು, ಕಾಡು ಬೆಕ್ಕನ್ನು ಬೇಟೆಯಾಡಿ, ನಾಗರಾಜನ ಸಹಾಯದಿಂದ ಅದನ್ನು ಪಿಕಪ್‌ ವಾಹನದಲ್ಲಿ ಹಾಕಿದ್ದ. ನಂತರ ಕೀರ್ತಿ ಹಾಗೂ ಅಂಬರೀಷ್ ಇಬ್ಬರೂ ಪುನಃ ಶಿಕಾರಿ ಮಾಡಲು ಗಾಳಿಗುಡ್ಡದ ಕಾಡಿಗೆ ಹೋಗಿದ್ದರು ಎಂಬ ಸತ್ಯ ವಿಚಾರಣೆ ವೇಳೆ ಬಯಲಾಗಿದೆ.

ನಾಗರಾಜ ತಂದುಕೊಟ್ಟಿದ್ದ ದಯಾನಂದ ಎಂಬುವವರ ಪರವಾನಗಿ ಇರುವ ಎಸ್.ಬಿ.ಬಿ.ಎಲ್ ಬಂದೂಕನ್ನು ಅಂಬರೀಷ್ ನಿರ್ಲಕ್ಷ್ಯದಿಂದ ಹಿಡಿದುಕೊಂಡು ಕಾಡಿನ ಕಲ್ಲು ಬಂಡೆಗಳ ಮೇಲೆ ಕುಳಿತುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಬಂದೂಕು ಫೈರ್ ಆಗಿಮೃತಪಟ್ಟಿದ್ದ ಎಂದು ಕೀರ್ತಿ ಹೇಳಿಕೊಂಡಿದ್ದಾಗಿ ಪೊಲೀಸ್‌ ಮೂಲಗಳು ಸ್ಪಷ್ಟಪಡಿಸಿವೆ. ಬೇಟೆಯ ವಿಷಯ ಮರೆಮಾಚುವ ಉದ್ದೇಶದಿಂದ ನಾಗರಾಜನೊಂದಿಗೆ ಸೇರಿ ಫೈರ್ ಆದ ಎಸ್.ಬಿ.ಬಿ.ಎಲ್ ಬಂದೂಕನ್ನು ಬದಲಾಯಿಸಿ ಅಂಬರೀಷನ ಪರವಾನಗಿ ಇಲ್ಲದ ನಾಡಬಂದೂಕನ್ನು ಮೃತ ದೇಹದ ಬಳಿ ಇಟ್ಟು, ಬೇಟೆ ಮಾಡಿದ ಕಾಡು ಬೆಕ್ಕನ್ನು ಹಾಗೂ ಫೈರ್ ಆದ ಖಾಲಿ ತೋಟವನ್ನು ನಾಶಪಡಿಸಿ, ಸಾಕ್ಷ್ಯ ನಾಶ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ.ಹೀಗಾಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ದಯಾನಂದ ಮತ್ತು ಕೊಂಡ್ಲೂರಿನ ಗೋಪಾಲ ಹಾಗೂ ಮಹೇಶ ಎಂಬುವವರಿಂದ ಎಸ್‌.ಬಿ.ಬಿ.ಎಲ್‌ ಬಂದೂಕುಗಳನ್ನು ಪಡೆದು ಶಿಕಾರಿ ಮಾಡಿರುವುದು ತನಿಖೆಯ ವೇಳೆ ಬಯಲಾಗಿದೆ.

ಜಿಲ್ಲೆಯ ಗಮನ ಸೆಳೆದಿದ್ದ ಪ್ರಕರಣ

ಆಗಸ್ಟ್‌ 26ರಂದು ನೇಗಿಲೋಣಿ ರಾವೆ ಗ್ರಾಮದಲ್ಲಿ ಅಂಬರೀಷ್‌ ಪರವಾನಗಿ ಇಲ್ಲದ ನಾಡಬಂದೂಕು ತೆಗೆದುಕೊಂಡು ಸ್ನೇಹಿತ ಕೀರ್ತಿಯೊಂದಿಗೆ ಕಾಡುಕೋಣಗಳನ್ನು ಓಡಿಸಲು ತೋಟಕ್ಕೆ ಹೋಗಿದ್ದ. ಜೊತೆಗಿದ್ದ ಕೀರ್ತಿ ವಾಪಸ್‌ ಮನೆಗೆ ಮರಳಿದ ನಂತರ ಅಂಬರೀಷ್‌ ತನ್ನ ಮನೆಗೆ ವಾಪಸ್‌ ಬರುವಾಗ, ಗಾಳಿಗುಡ್ಡದ ಕಲ್ಲು ಬಂಡೆ ಮೇಲೆ ಬಿದ್ದು, ಬಂದೂಕಿನ ಕುದುರೆಗೆ ರಬ್ಬರ್ ಬೂಟ್ ತಾಗಿ ಗುಂಡು ಸಿಡಿದು ಎದೆಯ ಕೆಳಭಾಗಕ್ಕೆ ತಗಲಿ ಮೃತಪಟ್ಟಿದ್ದ ಎಂದು ದೂರು ನೀಡಲಾಗಿತ್ತು.

ಆದರೆ, ಅಂಬರೀಷ್ ಅವರ ಸಾವಿನ ಬಗ್ಗೆ ‌ಮನೆಯವರು ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ಗಮನ ಸೆಳೆದಿತ್ತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.