
ಶಿವಮೊಗ್ಗ: ‘ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸವಿತಾ ಸಮಾಜವನ್ನು ಅವ್ಯಾಚ ಶಬ್ಧ ಬಳಸಿ ನಿಂದಿಸಿದ್ದಾರೆ’ ಎಂದು ಆರೋಪಿಸಿರುವ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ, ರವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿತು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಮಾತನಾಡಿ, ‘ಸಿ.ಟಿ.ರವಿ ಅವರು ಶಾಸಕ, ಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರು ತೋರಿದ್ದ ದುರಹಂಕಾರದ ವರ್ತನೆಯ ಕಾರಣಕ್ಕೆ ಚಿಕ್ಕಮಗಳೂರು ಕ್ಷೇತ್ರದ ಜನರು ಹೀನಾಯವಾಗಿ ಸೋಲಿಸಿ ಅವರ ತಲೆಗೆ ಏರಿದ್ದ ಅಧಿಕಾರದ ಅಮಲನ್ನು ಇಳಿಸಿದ್ದಾರೆ. ಆದರೂ ಬುದ್ಧಿ ಕಲಿಯದ ಅವರು ಇನ್ನೂ ಅಂತಹ ಸಮುದಾಯ ವಿರೋಧಿ ಹೇಳಿಕೆ ನೀಡುವುದನ್ನು ನಿಲ್ಲಿಸಿಲ್ಲ’ ಎಂದು ದೂರಿದರು.
‘ಹಿಂದುಳಿದ ವರ್ಗಗಳಿಗೆ ಸೇರಿದ ಸವಿತಾ ಸಮಾಜದ ವಿರುದ್ದ ಸಂವಿಧಾನ ಮತ್ತು ಕಾನೂನುಗಳ ಮೂಲ ಆಶಯಗಳಿಗೆ ವಿರುದ್ದವಾಗಿ ಮಾತನಾಡಿ ಸಿ.ಟಿ.ರವಿ ಆ ಸಮಾಜವನ್ನು ಅತ್ಯಂತ ತುಚ್ಚವಾಗಿ ಕಂಡಿದ್ದಾರೆ. ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ವಿಧಾನ ಪರಿಷತ್ ಸದಸ್ಯತ್ವದಿಂದ ಅವರನ್ನು ವಜಾ ಮಾಡಬೇಕು ಹಾಗೂ ಪೊಲೀಸ್ ಇಲಾಖೆ ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಶರತ್ ಮರಿಯಪ್ಪ, ನಾಗರಾಜ ಕಂಕಾರಿ, ಎಚ್.ಫಾಲಾಕ್ಷಿ, ಜಿ.ಡಿ. ಮಂಜುನಾಥ್, ಚೈತ್ರಾ ಮೋಹನ್, ಎಸ್.ಕೆ. ಭಾಸ್ಕರ್, ಪಿ. ಮೋಹನ್, ಆರ್. ರಾಘವೇಂದ್ರ, ಬಸವರಾಜ, ಗಂಗಾಧರ್, ಟಿ.ಡಿ. ಶಶಿಕುಮಾರ್, ರವಿಕುಮಾರ್, ಮುರುಗೇಶ್, ಚಂದ್ರಶೇಖರ್, ಮಂಜುನಾಥ್, ಗಂಗಾಧರ್, ಜಯಶೀಲ, ಎಂ.ಸಿದ್ದರಾಮು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.