ADVERTISEMENT

ಸಾಗರ: ದಂತಿ ಪರೋಪಕಾರ ಮನೋಭಾವ ಮಾದರಿ

ಆದ್ವೈತ ವಾಚಸ್ಪತಿ ಡಾ. ಪಾವಗಡ ಪ್ರಕಾಶ್ ರಾವ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:46 IST
Last Updated 29 ಜನವರಿ 2023, 5:46 IST
ಸಾಗರದಲ್ಲಿ ವೈ.ಎ.ದಂತಿ ಅಭಿಮಾನಿ ಬಳಗದಿಂದ ಶನಿವಾರ ಆಯೋಜಿಸಿದ್ದ ದಂತಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.
ಸಾಗರದಲ್ಲಿ ವೈ.ಎ.ದಂತಿ ಅಭಿಮಾನಿ ಬಳಗದಿಂದ ಶನಿವಾರ ಆಯೋಜಿಸಿದ್ದ ದಂತಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.   

ಸಾಗರ: ‘ವೈ.ಎ. ದಂತಿ ಓರ್ವ ಗುಪ್ತ ದಾನಿ. ಎಡಗೈನಿಂದ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ತಾವು ಗಳಿಸಿದ್ದರಲ್ಲಿ ಒಂದು ಭಾಗ ದಾನ ಮಾಡುವ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರ’ ಎಂದು ಆದ್ವೈತ ವಾಚಸ್ಪತಿ ಡಾ. ಪಾವಗಡ ಪ್ರಕಾಶ್ ರಾವ್ ತಿಳಿಸಿದರು.

ಇಲ್ಲಿನ ಭಾರತೀ ತೀರ್ಥ ಕಲ್ಯಾಣ ಮಂಟಪದಲ್ಲಿ ಶನಿವಾರ ವೈ.ಎ.ದಂತಿ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ವೈ.ಎ.ದಂತಿ ‘ಅಭಿನಂದನೆ-ಅಭಿವಂದನೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಲ್ಪಸ್ವಲ್ಪ ಕೊಟ್ಟು ಅಪಾರ ಪ್ರಚಾರ ಪಡೆಯುವ ಇಂದಿನ ದಿನಗಳಲ್ಲಿ ದಂತಿ ನಮ್ಮ ನಡುವೆ ಗುಪ್ತದಾನಿಯಾಗಿ ವಿಶೇಷವಾಗಿ ನಿಲ್ಲುತ್ತಾರೆ. ದಂತಿಯವರು ಮಾಡಿರುವ ದಾನ ಸಮಾಜಕ್ಕೆ ಗೊತ್ತಾಗದೆ ಹೋದಲ್ಲಿ ಲೋಪ ಆಗುತ್ತದೆ ಎಂದು ಅವರ ಸ್ನೇಹಿತರೆ ಅಭಿಪ್ರಾಯಪಡುತ್ತಾರೆ. ಪರೋಪಕಾರಿ ಮನೋಭಾವವನ್ನು ರೂಢಿಸಿಕೊಂಡಿರುವ ದಂತಿ ಅವರು ತಮ್ಮ ಜೊತೆಗೆ ಸಮಾಜವನ್ನು ತೆಗೆದುಕೊಂಡು ಹೋಗುವ ರೀತಿ ಅನುಕರಣೀಯ. ಅಂತಹ ವಿಶೇಷ ವ್ಯಕ್ತಿಯ ಸಾಧನೆಯನ್ನು ಗುರುತಿಸಿ ಅಭಿನಂದಿಸುವುದು, ಅವರ ಕುರಿತು ಅಭಿನಂದನಾ ಗ್ರಂಥ ಹೊರ ಬರುತ್ತಿರುವುದು ದಂತಿಯವರ ಈತನಕದ ಸಾಧನೆಗೆ ಹಿಡಿದ ಕೈಗನ್ನಡಿ’ ಎಂದು ಹೇಳಿದರು.

ADVERTISEMENT

ದಂತಿ ಅವರ ಕುರಿತ ‘ಅನನ್ಯ ಅಭಿನಂದನಾ ಗ್ರಂಥ’ವನ್ನು ಲೋಕಾರ್ಪಣೆ ಮಾಡಿದ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ, ‘ದಂತಿಯವರ ಚೈತನ್ಯ ಸಮಾಜಕ್ಕೆ ಅನುಕರಣೀಯ. ಲೋಕೋಪಯೋಗಿ ಇಲಾಖೆ ನೌಕರರಾಗಿ, ಹಿಂದಿ ಶಿಕ್ಷಕರಾಗಿ, ಖಾಸಗಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಪುಸ್ತಕ ಸಂಸ್ಕೃತಿ ಪ್ರಸಾರಕರಾಗಿ ದಂತಿಯವರು ವಿವಿಧ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೂಲ್ಯ. ದಂತಿಯವರ ಈ ಹೊತ್ತಿನ ಎಲ್ಲ ಸಾಧನೆಗೆ ಪತ್ನಿ ಶಾಂತಾ ದಂತಿ ಮತ್ತು ಮಕ್ಕಳು ಬೆನ್ನೆಲುಬಾಗಿ ನಿಂತಿದ್ದಾರೆ. ಬದುಕಿನಲ್ಲಿ ಸಾರ್ಥಕತೆಯ ಹೆಜ್ಜೆ ಗುರುತು ಉಳಿಸಿರುವ ದಂತಿ ಮಾದರಿ ಜೀವನ ನಡೆಸಿದವರು’ ಎಂದು ತಿಳಿಸಿದರು.

ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಂತಾ ದಂತಿ, ಟಿ.ಎಂ.ಸುಬ್ಬರಾವ್, ಮಾ.ವೆಂ.ಸ.ಪ್ರಸಾದ್, ಡಾ. ಕೆ. ಪ್ರಭಾಕರ ರಾವ್, ಅಬಸೆ ದಿನೇಶಕುಮಾರ್ ಜೋಷಿ ಇದ್ದರು.

ಐ.ವಿ.ಹೆಗಡೆ ಸ್ವಾಗತಿಸಿದರು. ಮಾ.ಸ.ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂಗರ ಪಂ. ಕಿರಣ್ ಹೆಗಡೆ ಮಗೇವಾರ್ ಅವರಿಂದ ಬಾನ್ಸುರಿ ವಾದನ ನಡೆಯಿತು.ವಸುಧಾ ಶರ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು. ನಾರಾಯಣಮೂರ್ತಿ ಕಾನುಗೋಡು ಮತ್ತು ಕವಿತಾ ಶ್ರೀಧರ ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.