ADVERTISEMENT

ನಿರಂತರ ಜ್ಯೋತಿ ಲೋಪ; ತನಿಖೆಗೆ ಸಮಿತಿ ರಚನೆ

15 ದಿನಗಳ ಒಳಗೆ ವರದಿ ಸಲ್ಲಿಕೆಗೆ ಸಚಿವ ಕೆ.ಎಸ್‌.ಈಶ್ವರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 12:32 IST
Last Updated 10 ಫೆಬ್ರುವರಿ 2021, 12:32 IST
ಶಿವಮೊಗ್ಗದಲ್ಲಿ ಬುಧವಾರ ನಡೆದ ನಿರಂತರ ಜ್ಯೋತಿ ಕಾಮಗಾರಿಗಳ ಅನುಷ್ಠಾನ ಕುರಿತ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು.
ಶಿವಮೊಗ್ಗದಲ್ಲಿ ಬುಧವಾರ ನಡೆದ ನಿರಂತರ ಜ್ಯೋತಿ ಕಾಮಗಾರಿಗಳ ಅನುಷ್ಠಾನ ಕುರಿತ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು.   

ಶಿವಮೊಗ್ಗ: ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿನ ಲೋಪಗಳ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, ವಿಷಯ ತಜ್ಞರು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು. ಮೆಸ್ಕಾಂ ಅಧಿಕಾರಿಗಳು ಸಮಿತಿಗೆ ಎಲ್ಲಾ ಮಾಹಿತಿ ಒದಗಿಸಬೇಕು. ಸಮಿತಿ ಪರಿಶೀಲನೆ ನಡೆಸಿ 15 ದಿನಗಳ ಒಳಗೆ ವರದಿ ಸಲ್ಲಿಸಬೇಕು. ಅಗತ್ಯವಿದ್ದರೆ ಹೆಚ್ಚಿನ ತನಿಖೆ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು ಎಂದರು.

ADVERTISEMENT

ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಗುತ್ತಿಗೆದಾರರಿಗೆ ಈಗಾಗಲೇ ಸಂಪೂರ್ಣ ಹಣ ಪಾವತಿಸಲಾಗಿದೆ. ಫೀಡರ್‌ಗಳಲ್ಲಿ ಅಳವಡಿಸಿರುವ ಕಂಬಗಳ ಲೆಕ್ಕವೂ ಸಮರ್ಪಕವಾಗಿಲ್ಲ. ಪ್ರತಿ ಕಂಬಗಳಿಗೆ ಸಂಖ್ಯೆಯನ್ನೂ ನಮೂದಿಸಿಲ್ಲ. ಕಾಮಗಾರಿ ಆರಂಭಕ್ಕಿಂತ ಮೊದಲು ಗುತ್ತಿಗೆದಾರರ ಜತೆ ಬಾಂಡ್ ಬರೆಸಿಲ್ಲ. 2019ರಿಂದ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನ ಆರಂಭಿಸಲಾಗಿದೆ. ಮೂಲ ಕ್ರಿಯಾ ಯೋಜನೆ ಉಲ್ಲಂಘಿಸಿ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆ ಅನುಷ್ಠಾನದ ಲೋಪದೋಷಗಳನ್ನು ಗುತ್ತಿಗೆದಾರರೇ ಸರಿಪಡಿಸಬೇಕು. ಗುತ್ತಿಗೆದಾರನಿಗೆ ಪಾವತಿಯಾಗಿರುವ ಹಣವನ್ನು ವಸೂಲು ಮಾಡಬೇಕು. ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಮೆಸ್ಕಾಂ ವ್ಯಾಪ್ತಿಯ ಇತರ ಜಿಲ್ಲೆಗಳಲ್ಲಿ ನಡೆದಿರುವ ಯೋಜನೆ ಅನುಷ್ಠಾನದ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.