ADVERTISEMENT

ಹೊಸನಗರ: ಸಾವೇಹಕ್ಲು ಹಿನ್ನೀರಿನಲ್ಲಿ ಮೀನುಗಳ ಸಾವು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:54 IST
Last Updated 18 ಏಪ್ರಿಲ್ 2021, 4:54 IST
ಹೊಸನಗರ ತಾಲ್ಲೂಕಿನ ಸಾವೇಹಕ್ಲು ಜಲಾಶಯ ಹಿನ್ನೀರ ಪ್ರದೇಶದಲ್ಲಿ ಮೀನುಗಳು ಸತ್ತಿರುವುದು
ಹೊಸನಗರ ತಾಲ್ಲೂಕಿನ ಸಾವೇಹಕ್ಲು ಜಲಾಶಯ ಹಿನ್ನೀರ ಪ್ರದೇಶದಲ್ಲಿ ಮೀನುಗಳು ಸತ್ತಿರುವುದು   

ಹೊಸನಗರ: ತಾಲ್ಲೂಕಿನ ಸಾವೇಹಕ್ಲು ಜಲಾಶಯದ ಮುಳುಗಡೆ ಪ್ರದೇಶದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ.

ತಾಲ್ಲೂಕಿನ ಕರಿಮನೆ (ನಿಲ್ಸಕಲ್) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿನಕೈ, ಬ್ಯಾಕೋಡು, ಹೆರಟೆ, ಚಕ್ಕಾರು ಸೇರಿ ಸಾವೇಹಕ್ಲು ಹಿನ್ನೀರ ಪ್ರದೇಶದಲ್ಲಿ ಸತ್ತ ಮೀನುಗಳು ಬಿದ್ದಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಸ್ಥಳೀಯ ನಿವಾಸಿ ಆಲ್ಬನ್ ಡಿಸೋಜ ತಿಳಿಸಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಚಕ್ರಾ ಮತ್ತು ಸಾವೇಹಕ್ಲು ಹಿನ್ನೀರ ಪ್ರದೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಮೀನುಮರಿಗಳನ್ನು ಬಿಡಲಾಗಿತ್ತು. ಕಾಟ್ಲಾ, ಗೌರಿ, ಬಾಳೇ ಮೀನುಮರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡಲಾಗಿತ್ತು. ಈಗ ಸತ್ತ ಮೀನುಗಳಲ್ಲೂ ಅವುಗಳೇ ಅಧಿಕವಾಗಿವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಲ್ಲೂಕು ಪಂಚಾಯಿತಿ ಮತ್ತು ಮೀನುಗಾರಿಕಾ ಇಲಾಖೆ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ಈಗ ಮೀನುಗಳು ಸಾವನಪ್ಪುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೀನುಗಳ ಸಾವಿಗೆ ಕಾರಣ ಏನು ಎಂಬುದನ್ನು ದೃಢಪಡಿಸಬೇಕು ಮತ್ತು ಮೀನುಗಳು ಸಾಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.