
ಶಿವಮೊಗ್ಗ: ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದ ಮರ್ಯಾದೆ ಗೇಡು ಹತ್ಯೆ ಪ್ರಕರಣದಿಂದ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ದಲಿತ ಸಮುದಾಯದ ಹುಡುಗನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯ. ಆಧುನಿಕ ದಿನಗಳಲ್ಲೂ ಇಂಥ ಪ್ರಕರಣ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಇನ್ನೆಲ್ಲೂ ಇಂತಹ ಘಟನೆ ನಡೆಯದಂತೆ ರಾಜ್ಯ ಸರ್ಕಾರ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಾನ್ಯಾ ಕೊಲೆ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ, ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಹತ್ಯೆಗಳಲ್ಲಿ ಯಾವ ಗೌರವದ ವಿಚಾರವೂ ಇಲ್ಲ. ಇದೊಂದು ಜಾತಿಗ್ರಸ್ತ ಸಮಾಜ ಎಸಗುವ ಕ್ರೂರ ಕೊಲೆಯಷ್ಟೇ. ಈ ಹತ್ಯೆಗಳು ಜಾತಿ ಮತ್ತು ಪಿತೃಪ್ರಭುತ್ವ ಸಮಾಜದ ಸಾಧನಗಳಾಗಿವೆ. ಭಯ ಮತ್ತು ಭಯೋತ್ಪಾದನೆಯ ಮೂಲಕ ಜಾತಿ ವ್ಯವಸ್ಥೆಯನ್ನು ಹೇರುವ, ಮಹಿಳೆಯರ ದೇಹ ಮತ್ತು ಸ್ವಾತಂತ್ರ್ಯವನ್ನು ನಿಯಂತ್ರಿಸಲು ನಿರಂತರವಾಗಿ ಯತ್ನಿಸಲಾಗುತ್ತಿದೆ. ಸ್ವಂತ ಮಗಳ ಜೀವ ತೆಗೆಯುವುದು ಜಾತಿ ವ್ಯವಸ್ಥೆಯ ಕ್ರೌರ್ಯ. ಇಂತಹ ಕೃತ್ಯಗಳು ಸಂವಿಧಾನದ ಆಶಯವಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೂಲಭೂತ ಮೌಲ್ಯಗಳಿಗೆ ಹೊಡೆತ ನೀಡುತ್ತವೆ ಎಂದು ಆಕ್ರೋಶ ಹೊರಹಾಕಿದರು.
ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್‌ನ ಎಚ್. ಪಿ. ಗಿರೀಶ್, ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಬಿ. ಲೋಕೇಶ್, ಎಸ್. ಕುಮಾರೇಶ್, ಇ.ಟಿ. ನಿತಿನ್, ವಿನಯ್ ತಾಂಡ್ಲೆ, ಎಸ್. ಬಸವರಾಜ್, ಮೋಹನ್ ಸೋಮಿನಕೊಪ್ಪ, ಕೆ.ಎಲ್. ಪವನ್, ಕೇಶವ ಸೀಗೆಹಟ್ಟಿ, ಮಿಥುನ್, ಸಾಹಿಲ್, ಸುರೇಶ್, ಜಿ. ಕಿರಣ್, ಸುಹಾಸ್, ನಿತಿನ್, ವಿನ್ಯಾಸ್ ಗೆಡ್ಡೆ, ಸಮಿವುಲ್ಲಾ, ಸಂದೇಶ್, ಕಾರ್ತಿಕ್, ವಿಶಾಲ್ ಬೊಮ್ಮನಕಟ್ಟೆ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
`ಮಾನ್ಯ’ ಹೆಸರಲ್ಲಿ ಕಾಯ್ದೆ ಜಾರಿಗೊಳಿಸಿ ಇನಾಂ ವೀರಾಪುರದಲ್ಲಿ ತನ್ನದೇ ಸ್ವಂತ ಮಗಳನ್ನು ತಂದೆಯೊಬ್ಬ ಮೃಗೀಯವಾಗಿ ಕೊಂದಿದ್ದಾರೆ. ಇಂತಹ ಹೇಯ ಕೃತ್ಯವನ್ನು ಜಾತಿವಾದಿ ಸಮಾಜ ಸಮರ್ಥಿಸುತ್ತಿದೆ. ಜಾತಿ ದೌರ್ಜನ್ಯ ಮರ್ಯಾದೆಗೇಡು ಹತ್ಯೆ ಹಾಗೂ ಜಾತೀಯತೆಯನ್ನು ತೊಡೆದು ಹಾಕಲು ಎಲ್ಲ ಸರ್ಕಾರಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಇಂತಹ ಪ್ರಕರಣ ಮುಂದೆ ರಾಜ್ಯದಲ್ಲಿ ಮತ್ತೆ ಪುನರಾವರ್ತನೆ ಆಗದಂತೆ ಕಠಿಣ ಕಾಯ್ದೆಯನ್ನು`ಮಾನ್ಯ’ ಹೆಸರಲ್ಲಿ ತರಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.