ADVERTISEMENT

ಬಂಗಾರಪ್ಪ ಆಸ್ತಿ ಕರಗಿಸಲು ದೇವೇಗೌಡರಿಂದ ಹುನ್ನಾರ: ಶಾಸಕ ಹಾಲಪ್ಪ ಹರತಾಳು ಟೀಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 12:39 IST
Last Updated 19 ಅಕ್ಟೋಬರ್ 2018, 12:39 IST
ಸಾಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿಜಿಪಿಗೆ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರನ್ನು ಶಾಸಕ ಎಚ್. ಹಾಲಪ್ಪ ಹರತಾಳು  ಪಕ್ಷಕ್ಕೆ ಬರಮಾಡಿಕೊಂಡರು.
ಸಾಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿಜಿಪಿಗೆ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರನ್ನು ಶಾಸಕ ಎಚ್. ಹಾಲಪ್ಪ ಹರತಾಳು  ಪಕ್ಷಕ್ಕೆ ಬರಮಾಡಿಕೊಂಡರು.   

ಸಾಗರ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಆಸ್ತಿಯನ್ನು ಕರಗಿಸುವ ಸಲುವಾಗಿಯೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮಧು ಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸಿದ್ದಾರೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿಜಿಪಿಗೆ ಸೇರ್ಪಡೆಯಾದ ಮಾಸೂರು, ಪಡವಗೋಡು ಭಾಗದ ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.

ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಕುಟುಂಬದವರನ್ನು ಹೊರತುಪಡಿಸಿ ಮತ್ತೊಬ್ಬರ ಏಳಿಗೆ ಬಯಸಿದವರಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಸೋಲುವುದು ಖಚಿತ ಎಂದು ಗೊತ್ತಿದ್ದರೂ ಅವರು ಮಧು ಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸಿದ್ದಾರೆ ಎಂದರು.

ADVERTISEMENT

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಈಡಿಗರೆಲ್ಲ ಒಂದಾಗಿ ಎಂದು ಕಾಂಗ್ರೆಸ್, ಜೆಡಿಎಸ್ ಪರವಾಗಿ ಕರೆ ಕೊಡಲಾಗುತ್ತಿದೆ. ಆದರೆ ಯಾವ ಕಾರಣಕ್ಕಾಗಿ ಒಂದಾಗಬೇಕು ಎಂಬುದನ್ನು ಯಾರೂ ಹೇಳುತ್ತಿಲ್ಲ. ಈಡಿಗ ಸಮುದಾಯಕ್ಕೆ ಸೇರಿರುವವ ಆರು ಶಾಸಕರು ಬಿಜೆಪಿಯಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಒಬ್ಬರಾದರೂ ಈಡಿಗ ಶಾಸಕರು ಇದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.

‘ಬಿಜೆಪಿ ಕೇವಲ ಲಿಂಗಾಯಿತ, ಬ್ರಾಹ್ಮಣರ ಪಕ್ಷ ಎನ್ನುವ ಕಾಲ ಯಾವತ್ತೊ ಮುಗಿದಿದೆ. ನಾನು ಬಿಜಿಪಿಗೆ ಸೇರಿದಾಗ ಲಿಂಗಾಯಿತರನ್ನು ಗೆಲ್ಲಿಸಲು ಹೀಗೆ ಮಾಡಿದ್ದಾನೆ ಎಂದು ದೂರಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈಡಿಗ ಸಮುದಾಯಕ್ಕೆ ಕೊಟ್ಟಷ್ಟು ಕೊಡುಗೆಯನ್ನು ಅದೇ ಸಮುದಾಯದವರು ಮುಖ್ಯಮಂತ್ರಿ ಅಥವಾ ಸಚಿವರಾಗಿದ್ದಾಗ ನೀಡಲಿಲ್ಲ’ ಎಂದರು.

ಕೆಲವರು ಬಿ.ವೈ. ರಾಘವೇಂದ್ರ ಅವರನ್ನು ಬಸ್ ಸ್ಟ್ಯಾಂಡ್ ರಾಘು ಎಂದು ಟೀಕಿಸುತ್ತಿದ್ದಾರೆ. ಹೀಗೆ ಟೀಕಿಸುವವರು ಶಾಸಕರಾಗಿದ್ದಾಗ ಬಸ್ ನಿಲ್ದಾಣದ ಬದಲು ಕೇವಲ ಶೌಚಾಲಯ ಕಟ್ಟಿಸಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಟೀಕಿಸಿದರು.

ಇದೇ ಸಂದರ್ಭದಲ್ಲಿ ಪಡವಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಡಿ. ಬಂಗಾರಪ್ಪ, ಸದಸ್ಯ ಶಿವಕುಮಾರ್, ಶಿಲ್ಪ ಪರಶುರಾಂ, ಕವಿತಾ ಪ್ರೇಮ್ ಕುಮಾರ್, ರೇಣುಕಾ ರಾಜಪ್ಪ, ಲತಾ ಮಾಲತೇಶ್, ಮಾಸೂರು ಪಂಚಾಯಿತಿ ವ್ಯಾಪ್ತಿಯ ಪ್ರಮುಖರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಆರ್. ಶ್ರೀನಿವಾಸ್, ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಲೋಕನಾಥ ಬಿಳಿಸಿರಿ, ಪ್ರಭಾಕರ ಶೆಟ್ಟಿ, ಉಮಾ ಮಹೇಶ್, ಚಂದ್ರಶೇಖರ ಮಡಸೂರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.