ADVERTISEMENT

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಸಲ್ಲ: ಸತ್ಯ ಬಹಿರಂಗಡಿಸಿ; ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 6:25 IST
Last Updated 10 ಆಗಸ್ಟ್ 2025, 6:25 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ‘ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಸುಳ್ಳು ಹೇಳಿರುವ ಆ ಅನಾಮಿಕ ವ್ಯಕ್ತಿ ಯಾರು ಎಂಬುದು ಎಲ್ಲರಿಗೂ ತಿಳಿಯಬೇಕು. ಕೂಡಲೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸುಳ್ಳು ಪ್ರಚಾರ ಗಿಟ್ಟಿಸಲು ಹೊರಟಿರುವ ಆತನ ಹಿಂದೆ ಯಾರಿದ್ದಾರೆ. ಇದರ ಹಿಂದೆ ಯಾರ ಷಡ್ಯಂತ್ರವಿದೆ ಎಂಬುದು ಎಲ್ಲರಿಗೂ ಗೊತ್ತಾಗಲಿ’ ಎಂದರು.

‘ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಹಿಂದೂ ಸಮಾಜಕ್ಕೆ ಅಪಮಾನ ಮಾಡುವ ಕೆಲಸ ನಡೆಯುತ್ತಿದೆ. ಆ ಪುಣ್ಯಕ್ಷೇತ್ರದ ಬಗ್ಗೆ ಜನರಲ್ಲಿ ಅನುಮಾನ ಸೃಷ್ಟಿಸಲು ಪ್ರಯತ್ನಿಸಿದ ಆ ವ್ಯಕ್ತಿಗಳು ಯಾರು? ನೂರಾರು ಹೆಣ ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಹೇಳಿದ್ದಾನೆ. ಅವನೊಬ್ಬನೇ ನೂರಾರು ಹೆಣ ಹೂಳಲು ಸಾಧ್ಯವೇ? ಅವನ ಹಿಂದೆ ಯಾವ ರಾಷ್ಟ್ರದ್ರೋಹಿ ಹಾಗೂ ಧರ್ಮ ದ್ರೋಹಿ ಗುಂಪಿದೆ. ರಾಜ್ಯ ಸರ್ಕಾರ ತಕ್ಷಣ ಅದನ್ನು ಕಂಡು ಹಿಡಿಯಲಿ’ ಎಂದು ಆಗ್ರಹಿಸಿದರು.

ADVERTISEMENT

‘ವೀರೇಂದ್ರ ಹೆಗ್ಗಡೆಯವರಿಗೆ ಕೆಟ್ಟ ಹೆಸರು ತರಲು ಸಾಧ್ಯವಿಲ್ಲ. ಯಾರೂ ಕೂಡ ಹಿಂದೂ ಧರ್ಮ ಹಾಗೂ ಧರ್ಮಸ್ಥಳವನ್ನು ಹಾಳು ಮಾಡಲು ಸಾಧ್ಯವಿಲ್ಲ. ಈಗ ನಡೆದಿರುವ ಅಪಪ್ರಚಾರದಿಂದ ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ. ಘಟನೆಯ ಹಿಂದಿರುವ ಧರ್ಮದ್ರೋಹಿ ಗುಂಪಿನ ಷಡ್ಯಂತ್ರ ಏನೆಂದು ತಿಳಿಯಬೇಕು. ಅಪಪ್ರಚಾರ ಹೀಗೆಯೇ ಮುಂದುವರಿದರೆ ಹಿಂದೂ ಸಮಾಜ ಸರ್ಕಾರದ ವಿರುದ್ಧ ತಿರುಗಿಬೀಳುವ ಪರಿಸ್ಥಿತಿ ಬರಲಿದೆ’ ಎಂದು ಎಚ್ಚರಿಸಿದರು.

‘ಜನಾಗ್ರಹ’ ಪ್ರತಿಭಟನೆ ನಾಳೆ 

ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ತರಲು ಒಳಸಂಚು ನಡೆಯುತ್ತಿದೆ ಎಂದು ಆರೋಪಿಸಿರುವ ಶಿವಮೊಗ್ಗದ ಧಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಆ. 11ರಂದು ಬೆಳಿಗ್ಗೆ 10.30ಕ್ಕೆ ‘ಜನಾಗ್ರಹ’ ಹೆಸರಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ವೇದಿಕೆಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪ‍್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.