ADVERTISEMENT

22ರಿಂದ ನಾಟಕ ಅಕಾಡೆಮಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 4:47 IST
Last Updated 20 ಫೆಬ್ರುವರಿ 2021, 4:47 IST

ಶಿವಮೊಗ್ಗ: ಕರ್ನಾಟಕ ನಾಟಕ ಅಕಾಡೆಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಹವ್ಯಾಸಿ ರಂಗ ತಂಡಗಳ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ಫೆ.22ರಿಂದ 24ರವರೆಗೆ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ.

‘ಫೆ. 22ರಂದು ಕರ್ನಾಟಕ ಸಂಘದಲ್ಲಿ ರಂಗಾವಲೋಕನ ವಿಶೇಷ ಕಾರ್ಯಾಗಾರ ನಡೆಯಲಿದೆ. ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎಸ್. ಪಾಟೀಲ್ ಉದ್ಘಾಟಿಸುವರು. ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್. ಭೀಮಸೇನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಮಹೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಶಿವಕುಮಾರ್, ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್ ಭಾಗವಹಿಸುವರು’ ಎಂದು ಸಂಘದ ಕಾರ್ಯದರ್ಶಿ ವೈದ್ಯ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಚಪ್ಪ ಬಡಿಗೇರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಂಗಾವಲೋಕನದ ಮೊದಲ ಗೋಷ್ಠಿಯಲ್ಲಿ ರಂಗಪಠ್ಯ ವಿಮರ್ಶೆಹಾದಿ ಕುರಿತು ಗಣೇಶ ಅಮೀನಗಡ ವಿಷಯ ಮಂಡಿಸುವರು. ಡಾ. ಸಂಧ್ಯಾ ಕಾವೇರಿ ಸಂವಾದ ನಡೆಸಿಕೊಡುವರು. ವಿಜಯ ವಾಮನ ವಿಮರ್ಶೆ ಪರಿಭಾಷೆ ಕುರಿತು ಉಪನ್ಯಾಸ ನೀಡುವರು. ಡಾ.ಎಚ್.ಎಸ್. ನಾಗಭೂಷಣ ಸಂವಾದ ನಡೆಸುವರು. ಸಮಾರೋಪದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವರು ಎಂದರು.

ADVERTISEMENT

ಕುವೆಂಪು ರಂಗಮಂದಿರದಲ್ಲಿ ಫೆ.23 ಮತ್ತು 24ರಂದು ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಕುರಿತ ಕಾರ್ಯಾಗಾರ ಇರುತ್ತದೆ. ಫೆ.23ರಂದು ಬೆಳಿಗ್ಗೆ 10ಕ್ಕೆ ರಂಗ ನಿರ್ದೇಶಕ ಶ್ರೀಪಾದ್ ಭಟ್ ಕಾರ್ಯಾಗಾರ ಉದ್ಘಾಟಿಸುವರು. ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಭೀಮಸೇನ್ ಅಧ್ಯಕ್ಷತೆ ವಹಿಸುವರು.ಭೀಮೇಶ್ ನೀನಾಸಂ ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಡುವರು ಎಂದು ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ತಿಳಿಸಿದರು.

ಫೆ. 24ರಂದು ಬೆಳಿಗ್ಗೆ 10ಕ್ಕೆ ಬೆಳಕು ತಜ್ಞ ಮಂಜುನಾಥ್ ಹಿರೇಮಠ ಬೆಳಕಿನ ವಿನ್ಯಾಸ ಕುರಿತು ಉಪನ್ಯಾಸ ನೀಡುವರು. ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಪ್ರಮಾಣಪತ್ರ ವಿತರಿಸುವರು ಎಂದು ಕಲಾವಿದರ ತಂಡದ ಪ್ರಧಾನಕಾರ್ಯದರ್ಶಿ ಜಿ.ಆರ್. ಲವ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.