ADVERTISEMENT

ಭೀಕರ ಬರ | ಹೆಸರು ಮಾತ್ರ ಸಾಗರ.. ಕುಡಿಯುವ ನೀರಿಗೂ ತತ್ವಾರ...

ಎಂ.ರಾಘವೇಂದ್ರ
Published 12 ಮಾರ್ಚ್ 2024, 6:35 IST
Last Updated 12 ಮಾರ್ಚ್ 2024, 6:35 IST
ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತನಹಳ್ಳಿ ಗ್ರಾಮದಲ್ಲಿ ನೀರಿನ ಕೊರತೆಯಿಂದ ಒಣಗಿರುವ ಭತ್ತದ ಗದ್ದೆಯನ್ನು ತೋರಿಸುತ್ತಿರುವ ರೈತ
ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತನಹಳ್ಳಿ ಗ್ರಾಮದಲ್ಲಿ ನೀರಿನ ಕೊರತೆಯಿಂದ ಒಣಗಿರುವ ಭತ್ತದ ಗದ್ದೆಯನ್ನು ತೋರಿಸುತ್ತಿರುವ ರೈತ   

ಸಾಗರ: ಕಡು ಬೇಸಿಗೆಯಲ್ಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆನಾಡಿದ ಹೃದಯ ಭಾಗದಲ್ಲಿರುವ ಸಾಗರ ತಾಲ್ಲೂಕಿನಲ್ಲಿ ಈ ವರ್ಷ ಬರಗಾಲ ಆವರಿಸಿದೆ.

ತಾಲ್ಲೂಕನ್ನು ಈಗಾಗಲೇ ‘ಬರಪೀಡಿತ’ ಎಂದು ಘೋಷಿಸಲಾಗಿದೆ. ಕಳೆದ ಮುಂಗಾರಿನಲ್ಲಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 42ರಷ್ಟು ಕಡಿಮೆ ಮಳೆಯಾಗಿದೆ. ಮಳೆಯ ಕೊರತೆ ನಡುವೆಯೂ ಮಳೆಗಾಲದಲ್ಲಿ ಭತ್ತವನ್ನು ಬೆಳೆದು, ಕಷ್ಟಪಟ್ಟು ಕಾಪಾಡಿಕೊಂಡ ರೈತರು ಬೇಸಿಗೆ ಬೆಳೆ ಬೆಳೆದು ಕೈಸುಟ್ಟುಕೊಳ್ಳುವಂತಾಗಿದೆ.

ತಮ್ಮದೇ ನೀರಿನ ಮೂಲಗಳನ್ನು ಹೊಂದಿರುವ ಭತ್ತ ಬೆಳೆಗಾರರ ಕೈಗೆ ಒಂದಿಷ್ಟು ಬೆಳೆಯಾದರೂ ದಕ್ಕಿದೆ. ಆದರೆ, ನೀರಿನ ಮೂಲಗಳಿಲ್ಲದೆ ಮಕ್ಕಿಗದ್ದೆಯಲ್ಲಿ ಭತ್ತ ಬೆಳೆದ ರೈತರು ಫಸಲನ್ನು ಸಂಪೂರ್ಣ ಕಳೆದುಕೊಳ್ಳುವಂತಾಗಿದೆ. ಮೆಕ್ಕೆಜೋಳ ಬೆಳೆದ ರೈತರಿಗೂ ಸಂಕಷ್ಟ ಎದುರಾಗಿದೆ.

ADVERTISEMENT

ಈವರೆಗೆ ಮಲೆನಾಡಿನಲ್ಲಿ ಪ್ರಾಕೃತಿಕವಾಗಿ ದೊರಕುತ್ತಿದ್ದ ಅಬ್ಬಿ (ತೊರೆ) ಹಾಗೂ ಕೆರೆಯ ನೀರಿನಿಂದ ಕೃಷಿಕರು ನೀರಿನ ಅಗತ್ಯ ಪೂರೈಸಿಕೊಳ್ಳುತ್ತಿದ್ದರು. ತಾಲ್ಲೂಕಿನಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ 400ಕ್ಕೂ ಹೆಚ್ಚು ಕೆರೆಗಳಿವೆ. ಹೆಚ್ಚಿನ ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದರೆ, ಕೆಲವು ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿವೆ. ಪ್ರತಿವರ್ಷ ಕೆರೆಗಳ ದುರಸ್ತಿಗೆ ಸರ್ಕಾರ ಒಂದಿಷ್ಟು ಹಣ ಬಿಡುಗಡೆ ಮಾಡುತ್ತದೆ. ಶಾಸ್ತ್ರಕ್ಕೆಂದು ಕೆಲವು ಕಾಮಗಾರಿ ನಡೆಯುವುದು ಬಿಟ್ಟರೆ ಕೆರೆಗಳಲ್ಲಿನ ಜಲಮೂಲಗಳನ್ನು ಉಳಿಸಿಕೊಳ್ಳುವ ಗಂಭೀರ ಪ್ರಯತ್ನ ನಡೆದಿಲ್ಲ. ಇದೂ ಸಹ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಗಿಡಗಳನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ಸವಾಲಾಗಿದೆ. ಬಗರ್‌ ಹುಕುಂ ಜಾಗ ಸೇರಿ ಎಲ್ಲೆಂದರಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗಿದ್ದು, ನೀರಿನ ಅಗತ್ಯ ಹೆಚ್ಚಲು ಕಾರಣವಾಗಿದೆ. ನೀರಿನ ಕೊರತೆ ನೀಗಿಸಲು ಮಲೆನಾಡಿನ ಹಳ್ಳಿಗಳಲ್ಲಿ ಈಗ ಕೊಳವೆಬಾವಿ ಕೊರೆಯುವ ಯಂತ್ರಗಳ ಸದ್ದು ಜೋರಾಗಿ ಕೇಳಿ ಬರುತ್ತಿವೆ. ಆದರೆ ಶೇ 60ರಷ್ಟು ಕೊಳವೆಬಾವಿಗಳು ವಿಫಲವಾಗುತ್ತಿವೆ. ಹಳೆಯ ಕೊಳವೆ ಬಾವಿಗಳಲ್ಲೂ ನೀರಿನ ಸೆಲೆ ಬತ್ತುತ್ತಿದೆ. ಕಳೆದ ಒಂದು ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ 21 ಅಡಿಯಷ್ಟು ಕುಸಿದಿದೆ ಎಂದು  ರಾಷ್ಟ್ರೀಯ ಅಂತರ್ಜಲ ಸಮೀಕ್ಷಾ ವರದಿ ತಿಳಿಸಿದ್ದು, ಪರಿಸ್ಥಿತಿಯ ಭೀಕರತೆಗೆ ಹಿಡಿದಿರುವ ಕನ್ನಡಿಯಾಗಿದೆ.

ಸಾಗರ ನಗರಕ್ಕೆ ಶರಾವತಿ ನದಿಯ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸಲಾಗುತ್ತಿದ್ದರೂ ವಾರದ ಎಲ್ಲಾ ದಿನಗಳಲ್ಲೂ ನೀರು ಪೂರೈಸಲಾಗುವುದು ಎಂಬ ಭರವಸೆ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ. ಹಿನ್ನೀರಿನಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಕರೂರು ಹೋಬಳಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಸಂಚಾರ ಕೆಲವೆ ದಿನಗಳಲ್ಲಿ ನಿಲ್ಲುವ ಆತಂಕ ಎದುರಾಗಿದೆ.

ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತಾಲ್ಲೂಕಿನ 47 ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗಬಹುದಾದ ಗ್ರಾಮಗಳು ಎಂದು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಕೊಳವೆಬಾವಿ ತೋಡುವ, ಈಗಾಗಲೇ ಇರುವ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಎಂಜಿನಿಯರ್‌ ಗುರುಕೃಷ್ಣ ಶೆಣೈ ತಿಳಿಸಿದರು.

ಏಪ್ರಿಲ್ ತಿಂಗಳ ಮೊದಲ ವಾರದ ಹೊತ್ತಿಗೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗುವ ಸಂಭವವಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಣಮಟ್ಟದ ವಿದ್ಯುತ್ ಕೊರತೆ

ನೀರಿನ ಕೊರತೆ ಒಂದಾದರೆ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಆಗದಿರುವುದು ರೈತರಿಗೆ ಮತ್ತೊಂದು ಸಮಸ್ಯೆಯಾಗಿದೆ. ಕೆಲವಡೆ ರೈತರು ಅನಧಿಕೃತವಾಗಿ ಸಿಂಗಲ್ ಫೇಸ್ ವಿದ್ಯುತ್ತನ್ನು ತ್ರಿ ಫೇಸ್‌ಗೆ ಬದಲಿಸುವ ಮಾರ್ಗವನ್ನು ಕಂಡುಕೊಂಡಿರುವುದು ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.

ಬರ ಪರಿಸ್ಥಿತಿ ನಿಭಾಯಿಸಲು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗೆ ₹ 45 ಲಕ್ಷ ಮಂಜೂರಾಗಿದೆ. ಹಿನ್ನೀರಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಲಾಂಚ್ ಸಂಚಾರ ನಿಲ್ಲದಂತೆ ಕ್ರಮ ಕೈಗೊಳ್ಳಲು ರ‍್ಯಾಂಪ್‌ ನಿರ್ಮಾಣಕ್ಕೆ ₹ 70 ಲಕ್ಷ ಅನುದಾನ ಬಿಡುಗಡೆಯಾಗಿದೆ.
–ಗೋಪಾಲಕೃಷ್ಣ ಬೇಳೂರು ಶಾಸಕರು
ಕೆರೆಗಳಲ್ಲಿ ಜಲಮೂಲ ಸಮೃದ್ಧವಾಗಿತ್ತು. ಅವುಗಳನ್ನು ಸುಸ್ಥಿತಿಯಲ್ಲಿಟ್ಟಿದ್ದರೆ ಬರ ಎನ್ನುವ ಶಬ್ದವೇ ಕೇಳಿಬರುತ್ತಿರಲಿಲ್ಲ. ಕೆರೆಗಳ ಅಭಿವೃದ್ಧಿ ಕಾಮಗಾರಿ ಕೇವಲ ಕಣ್ಣೊರೆಸುವ ಕೆಲಸ ಎನ್ನುವಂತಾಗಿದೆ.
–ಅಖಿಲೇಶ್ ಚಿಪ್ಪಳಿ ಪರಿಸರ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.