ADVERTISEMENT

ಡಿಎಸ್‌ಎಸ್; ಬೆಂಗಳೂರು ಚಲೋ ಮಾರ್ಚ್ 11ಕ್ಕೆ

ಬಜೆಟ್‌ನಲ್ಲಿ ₹ 25 ಸಾವಿರ ಕೋಟಿ ಹಣ ವಾಪಸ್ ಕೊಡಿ: ಎಂ.ಗುರುಮೂರ್ತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:12 IST
Last Updated 4 ಮಾರ್ಚ್ 2026, 4:12 IST
ಎಂ.ಗುರುಮೂರ್ತಿ
ಎಂ.ಗುರುಮೂರ್ತಿ   

ಶಿವಮೊಗ್ಗ: ‘ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಶೇ 24.1ರಷ್ಟು ಅನುದಾನ ಮೀಸಲಿರಿಸಬೇಕು. ಹಣ ದುರ್ಬಳಕೆ ತಡೆಯಲು ಕಾಯ್ದೆಯ ಸೆಕ್ಷನ್-7(ಸಿ) ರದ್ದುಪಡಿಸಬೇಕು, ಗ್ಯಾರಂಟಿ ಯೋಜನೆಗೆ ವರ್ಗಾಯಿಸಿದ ₹ 25 ಸಾವಿರ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ವಾಪಸ್ ಕೊಡುವಂತೆ ಆಗ್ರಹಿಸಿ ಮಾರ್ಚ್‌ 11ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ತಿಳಿಸಿದರು. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುವುದು ಸೇರಿದಂತೆ 17 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದರು. 

ದಲಿತರ ಅಭಿವೃದ್ಧಿಗೆ ವಿರುದ್ಧವಾಗಿ ಮೀಸಲಿರಿಸಿದ ಹಣ ಎಸ್‌ಇಪಿ/ ಟಿಎಸ್‌ಪಿಯಿಂದ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ ಹಣ ಹಿಂತಿರುಗಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಅವೈಜ್ಞಾನಿಕ ದರ ಹೆಚ್ಚಳಮಾಡಿ, ಆದೇಶ ಹೊರಡಿಸಬೇಕು. 

ADVERTISEMENT

ಖಾಲಿ ಜಾಗ ಹೊಂದಿರುವ ವಸತಿ ಸೌಲಭ್ಯ ವಂಚಿತರಿಗೆ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ ₹5 ಲಕ್ಷ ನೀಡಬೇಕು. ವಸತಿರಹಿತರಿಗೆ ಭೂಮಿ ಖರೀದಿಸಿ ನಿವೇಶನ ಹಂಚಿಕೆ ಮಾಡಬೇಕು. ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನ ಜೂನ್ 9ರಂದು ರಜಾ ರಹಿತ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು. 

ಬಗರ್‌ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಸಲ್ಲಿಸಿರುವ ನಮೂನೆ 57ರ ಅರ್ಜಿಗಳನ್ನು ಸೂಕ್ತ ಕಾರಣ ನೀಡದೆ ಏಕಪಕ್ಷೀಯವಾಗಿ ತಿರಸ್ಕಾರ ಮಾಡುತ್ತಿದೆ. ಇದರಿಂದ ಬೇರೆ ಭೂಮಿ ಇಲ್ಲದೆ ಅದೇ ಭೂಮಿಯಲ್ಲಿ ಸಾಗುವಳಿ ಮಾಡಿ, ಬದುಕುತ್ತಿರುವ ಬಡವರನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಭೂಪರಭಾರೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಬೇಕು. ಅರಣ್ಯ ಮತ್ತು ಅರಣ್ಯಾಧಾರಿತ ಆದಿವಾಸಿ ಕುಟುಂಬಗಳ ವಸತಿ ರಹಿತರಿಗಾಗಿ ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಡಿಎಸ್‌ಎಸ್ ಪದಾಧಿಕಾರಿಗಳಾದ ಎಂ.ಏಳುಕೋಟಿ, ಶಿವಬಸಪ್ಪ, ಕರಿಬಸಪ್ಪ, ಲಕ್ಷ್ಮಣ್, ಹರಿಗೆ ರವಿ, ಪ್ರೊ.ಚನ್ನಪ್ಪ, ಕೃಷ್ಣಪ್ಪ, ಸಂತೋಷ್, ಅನಿಲ್, ರಮೇಶ್ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.