ಶಿವಮೊಗ್ಗ: ‘ಶಿಕ್ಷಣ ವ್ಯವಸ್ಥೆಯಲ್ಲಿ ವಿಪರೀತ ಪೈಪೋಟಿಯ ಕಾರಣ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳ ಸಂಘರ್ಷ ನಡೆಯುತ್ತಿದೆ. ಇದು ಆತಂಕಕಾರಿ ಸಂಗತಿ. ಇಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಶಕ್ತಿ ತುಂಬುವ ಜೊತೆಗೆ ವಿಶೇಷ ರೀತಿಯ ಆಲೋಚನಾ ಕ್ರಮ ರೂಢಿಸಿಕೊಳ್ಳಬೇಕು’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಸಲಹೆ ನೀಡಿದರು.
ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಸ್ತಿ– ಅಂತಸ್ತು ಮನುಷ್ಯರನ್ನು ಉತ್ತಮರನ್ನಾಗಿಸಲು ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಒಳ್ಳೆಯ ವ್ಯಕ್ತಿತ್ವ ಬೆಳೆಯುತ್ತದೆ. ಸರ್ಕಾರಿ ಶಾಲೆಗಳ ಅಸ್ತಿತ್ವ ಉಳಿಸಲು ಸರ್ಕಾರ ಕೂಡ ಶ್ರಮಿಸುತ್ತಿದ್ದು, ಕೆಲವು ಭಾಗಗಳಲ್ಲಿ ಶಾಲೆಗಳು ಮುಚ್ಚುತ್ತಿರುವುದು ಶೋಚನೀಯ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
‘ಸಮಾಜದ ಆಗು–ಹೋಗುಗಳನ್ನು ಶಿಕ್ಷಕರು ಸೂಕ್ಷ್ಮವಾಗಿ ನೋಡುತ್ತಾರೆ. ಸಮಾಜಕ್ಕೆ ಹೊಸ ರೂಪ ಕೊಡುವಲ್ಲಿ ಶಿಕ್ಷಕರ ಪಾತ್ರವೂ ಹಿರಿದು. ಈ ಹಿಂದಿನ ದಿನಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸದೃಢ ದೇಶ ನಿರ್ಮಾಣಕ್ಕೆ ಶಿಕ್ಷಕರ ಶ್ರಮ ಅಗತ್ಯವಿದೆ’ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.
ಶಿಕ್ಷಣ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತದೆ. ಪ್ರತಿಫಲ ಬಯಸದೆ ಸಮಾಜದ ಉದ್ಧಾರಕ್ಕೆ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಆದ್ದರಿಂದ, ಶಿಕ್ಷಕರ ಶ್ರಮ ವ್ಯರ್ಥವಾಗಕೂಡದು ಎಂದು ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು 21, ವಿಶೇಷ ಸನ್ಮಾನಿತ ಶಿಕ್ಷಕರು 22 ಹಾಗೂ ನಿವೃತ್ತಿ ಹೊಂದಿದ 86 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಚಿಂತಕ ವೈ.ವಿ.ಗುಂಡೂರಾವ್ ಅವರು ಉಪನ್ಯಾಸ ನೀಡಿದರು. ಉಪ ವಿಭಾಗಾಧಿಕಾರಿ ಸತ್ಯನಾರಾಯಣ್, ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ, ಡಯೆಡ್ ಪ್ರಾಂಶುಪಾಲ ಎಚ್.ಆರ್. ಕೃಷ್ಣಮೂರ್ತಿ, ಪ್ರಮುಖರಾದ ಆರ್.ಮೋಹನ್ ಕುಮಾರ್, ಶ್ರೀಪತಿ, ಎಚ್.ಎಂ.ಮಧು, ಡಿ.ಬಿ.ರುದ್ರಪ್ಪ, ಧರ್ಮಪ್ಪ, ದಿನೇಶ್ ಇದ್ದರು.
ದೇಶದ ಉಜ್ವಲ ಭವಿಷ್ಯಕ್ಕೆ ಶಿಕ್ಷಕರ ಮಹತ್ವ ಅರಿತಿದ್ದ ರಾಧಾ ಕೃಷ್ಣನ್ ಅವರು ಮಹಾನ್ ಸಾಧಕರೊಂದಿಗೆ ಮೇಲ್ಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದಾರೆ.ಎಸ್.ಆರ್.ಮಂಜುನಾಥ ಡಿಡಿಪಿಐ
ಶಾಲೆಗಳಲ್ಲಿ ಶಿಕ್ಷಣದ ಮೌಲ್ಯ ಉಳಿದಿದೆ: ಸಿ.ಎಸ್.ಷಡಕ್ಷರಿ
‘ಒತ್ತಡದ ಬದುಕು ಹಾಗೂ ಕೌಟುಂಬಿಕ ಸಮಸ್ಯೆಗಳ ನಡುವೆಯೂ ಉತ್ತಮ ಸಮಾಜವನ್ನು ಕಟ್ಟುವುದು ಶಿಕ್ಷಕರಿಗೆ ದೊಡ್ಡ ಸವಾಲು. ಶಿಕ್ಷಕರ ನಿವೃತ್ತಿ ಹಾಗೂ ವರ್ಗಾವಣೆ ಸಂದರ್ಭದಲ್ಲಿ ಮಕ್ಕಳು ಕಣ್ಣೀರಾಗುವುದನ್ನು ನೋಡಿದರೆ ಸರ್ಕಾರಿ ಶಾಲೆಗಳಲ್ಲಿ ಇನ್ನೂ ಶಿಕ್ಷಣದ ಮೌಲ್ಯ ಉಳಿದಿದೆ ಅನ್ನಿಸುತ್ತದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು. ‘ಶಿಕ್ಷಕರು ಶೈಕ್ಷಣಿಕ ಕೆಲಸಗಳಿಗೆ ಮಾತ್ರ ಸೀಮಿತಗೊಳ್ಳದೆ ಶಿಕ್ಷಕರೇತರ ಕಾರ್ಯಗಳಲ್ಲಿಯೂ ತೊಡಗಿದ್ದಾರೆ. ಒತ್ತಡಗಳಿಗೆ ಮಣಿಯದೆ ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನ ಆಶಯದಂತೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಕರ ವೃತ್ತಿ ಗೌರವವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ಭರ್ಜರಿ ಊಟದ ವ್ಯವಸ್ಥೆ:
ಜಿಲ್ಲೆಯ 2500ಕ್ಕೂ ಹೆಚ್ಚು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಸಹಕಾರದೊಂದಿಗೆ ಇಲ್ಲಿನ ಬಂಜಾರ ಕನ್ವೆನ್ಸನ್ ಹಾಲ್ ನಲ್ಲಿ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರ ದಿನಾಚರಣೆಯಲ್ಲಿ ಇದೇ ಮೊದಲ ಬಾರಿಗೆ ‘ಡ್ರೈ ಪ್ರೋಟ್ ಕೋಸಂಬರಿ ಬೀನ್ಸ್ ಪಲ್ಯ ಹಾಲು ಪಾಯಸ ಪೇಣಿ– ಬಾದಾಮಿ ಹಾಲು ಸ್ಪೆಷಲ್ ಮೈಸೂರು ಪಾಕ್ ಪೂರಿ–ಸಾಗು ಮೆಂತೆ ಬಾತ್– ಮೊಸರು ಬಜ್ಜಿ ಅನ್ನ ತಿಳಿಸಾರು ಸಾಂಬಾರು ಮೊಸರು ಮಜ್ಜಿಗೆ ಬೋಂಡ ಅಪ್ಪೆಸಾರು ಹಪ್ಪಳ ಬೀಡಾ ಐಸ್‌ಕ್ರೀಂ ಒಳಗೊಂಡ ಭಕ್ಷ್ಯ ಭೋಜನ ಬಡಿಸಲಾಯಿತು. ಶಿವಮೊಗ್ಗ ಬಿಇಒ ರಮೇಶ್ ಭೋಜನ ವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.