ADVERTISEMENT

ಶಿಕಾರಿಪುರ: ಸಮಸ್ಯೆಯ ಸುಳಿಯಲ್ಲಿ ಏತ ನೀರಾವರಿ ಯೋಜನೆ

ಶಿಕಾರಿಪುರ ತಾಲ್ಲೂಕು: ಕೋಟ್ಯಾಂತರ ರೂಪಾಯಿ ವಿದ್ಯುತ್‌ ಬಿಲ್ ಬಾಕಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 6:23 IST
Last Updated 9 ಮಾರ್ಚ್ 2025, 6:23 IST
ಶಿಕಾರಿಪುರ ತಾಲ್ಲೂಕು ಕಾಳೇನಹಳ್ಳಿ ಕುಮದ್ವತಿ ನದಿ ದಂಡೆಯಲ್ಲಿರುವ ಏತ ನೀರಾವರಿ ಯೋಜನೆಯ ಜಾಕ್‌ವೆಲ್
ಶಿಕಾರಿಪುರ ತಾಲ್ಲೂಕು ಕಾಳೇನಹಳ್ಳಿ ಕುಮದ್ವತಿ ನದಿ ದಂಡೆಯಲ್ಲಿರುವ ಏತ ನೀರಾವರಿ ಯೋಜನೆಯ ಜಾಕ್‌ವೆಲ್   

ಶಿಕಾರಿಪುರ: ತಾಲ್ಲೂಕಿನಲ್ಲಿ ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್‌ ಬಿಲ್‌ ಬಾಕಿಯಿಂದಾಗಿ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ವಿದ್ಯುತ್‌ ಬಿಲ್‌ ಪಾವತಿಸಿದರೆ ಮಳೆಗಾಲದಲ್ಲಿ ಕೆರೆಗಳಿಗೆ ನೀರು ಹರಿಯಲಿದೆ. ಆದರೆ ವಿದ್ಯುತ್‌ ಬಿಲ್‌ ಕಟ್ಟುವುದೇ ನೀರಾವರಿ ಇಲಾಖೆಗೆ ಹೊರೆಯಾಗಿರುವ ಕಾರಣ ಯೋಜನೆಗಳ ಸಮರ್ಪಕ ಬಳಕೆ ಸಾಧ್ಯವಾಗುತ್ತಿಲ್ಲ.

ತಾಲ್ಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿ ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್ ₹ 18.83 ಕೋಟಿ ಬಾಕಿ ಇದೆ. ಕಸಬಾ ಏತ ನೀರಾವರಿ ಯೋಜನೆ ವಿದ್ಯುತ್ ಬಿಲ್ ₹ 2.80 ಕೋಟಿ, ಸನ್ಯಾಸಿಕೊಪ್ಪ ₹ 44 ಲಕ್ಷ  ಬಾಕಿ ಇದೆ. ಉಡುಗಣಿ, ತಾಳಗುಂದ ಹೋಬಳಿ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಕಳೆದ ತಿಂಗಳು ಸರ್ಕಾರ ₹ 3.19 ಕೋಟಿ, ಕಸಬಾ ಏತ ನೀರಾವರಿ ಯೋಜನೆಗೆ ₹ 31 ಲಕ್ಷ ವಿದ್ಯುತ್ ಬಿಲ್ ಬಾಕಿ ಪಾವತಿಸಿದೆ.

ಆದರೆ ಬಾಕಿ ಇರುವ ಬಿಲ್‌ ಕಟ್ಟಲು ಇಲಾಖೆಯಿಂದ ಯಾವುದೇ ಅನುದಾನ ಬಂದಿಲ್ಲ. ರಾಜ್ಯ ಸರ್ಕಾರದ ಬಜೆಟ್‌ನಲ್ಲೂ ಈ ಬಗ್ಗೆ ಘೋಷಣೆಯಾಗಿಲ್ಲ. ಈ ಕಾರಣ ವಿದ್ಯುತ್‌ ಸಂಪರ್ಕ ಮತ್ತೆ ನೀಡುವ ಖಚಿತ ಭರವಸೆ ಇಲ್ಲ. ಇದರಿಂದ ಕೆರೆಗಳಿಗೆ ನೀರು ಹರಿಯುವುದೂ ಅನುಮಾನ ಎಂಬುದು ಅಧಿಕಾರಿಗಳ ಹೇಳಿಕೆ.

ADVERTISEMENT

2022ರಲ್ಲಿ ಏತ ನೀರಾವರಿ ಯೋಜನೆ ಆರಂಭವಾಗಿದ್ದರೂ ಕೆರೆಗಳಿಗೆ ನೀರು ಹರಿದಿದ್ದು ಕಳೆದ ವರ್ಷ (2024)ರಲ್ಲಿ ಮಾತ್ರ. ಆದರೆ ಯೋಜನೆಯ ಕಾರಣ 2022ರಿಂದ 2024ರ ವರೆಗೆ ವಿದ್ಯುತ್ ಬಿಲ್‌ ಪಾವತಿಸಲೇಬೇಕಿದೆ. ಇದು ಹೊರೆಯಾಗಿದೆ.

ಕನಿಷ್ಠ ಶುಲ್ಕದ ಹೊರೆ:

ಉಡುಗಣಿ, ತಾಳಗುಂದ, ಹೊಸೂರು ಹೋಬಳಿ ಏತ ನೀರಾವರಿ ಯೋಜನೆ ನೀರೆತ್ತುವ ಜಾಕ್‌ವೆಲ್‌ನ ನಿಗದಿತ ವಿದ್ಯುತ್ ಶುಲ್ಕ ಪ್ರತಿ ತಿಂಗಳಿಗೆ ₹ 25 ಲಕ್ಷ. ಇಲ್ಲಿ 3,610 ಎಚ್.ಪಿ. ಸಾಮರ್ಥ್ಯದ ಐದು ಮೋಟರ್‌ಗಳು ಕಾರ್ಯನಿರ್ವಹಿಸುತ್ತವೆ. ಈ ₹ 25 ಲಕ್ಷ ಸರಾಸರಿ ಶುಲ‌್ಕವನ್ನು ಪ್ರತಿ ತಿಂಗಳೂ ಭರಿಸಬೇಕು. ಆದರೆ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಯುವುದು ಮಾತ್ರ ಮೂರು ತಿಂಗಳು. ಹೀಗಾಗಿ ಕನಿಷ್ಠ ಶುಲ್ಕದ ಹೊರೆ ಹೆಚ್ಚಿದೆ.

ತಾಲ್ಲೂಕಿನ ಕಾಳೇನಹಳ್ಳಿ ಸಮೀಪದ ಕಸಬಾ ಏತ ನೀರಾವರಿ ಯೋಜನೆ ನೀರೆತ್ತುವ ಜಾಕ್‌ವೆಲ್‌ನ ವಿದ್ಯುತ್ ಸರಾಸರಿ ಶುಲ್ಕ  ಪ್ರತಿ ತಿಂಗಳಿಗೆ ₹ 5.11 ಲಕ್ಷ. ಇಲ್ಲಿ 1,140 ಎಚ್.ಪಿ. ಸಾಮರ್ಥ್ಯದ 3 ಮೋಟರ್‌ಗಳಿವೆ. ಯೋಜನೆ ಮೂಲಕ ಕೆರೆಗೆ ನೀರು ಹರಿಸಲು ಆರಂಭಿಸಿ ವರ್ಷವಾಗಿದೆ. ಆದರೆ ವಿದ್ಯುತ್ ಸಂಪರ್ಕ ನೀಡಿದಾಗಿನಿಂದ ಇಲ್ಲಿಯವರೆಗೂ ಕನಿಷ್ಠ ಶುಲ್ಕ ಪಾವತಿಸಬೇಕಿರುವ ಕಾರಣಕ್ಕೆ ವಿದ್ಯುತ್ ಶುಲ್ಕದ ಹೊರೆ ದುಬಾರಿಯಾಗಿ ಪರಿಣಮಿಸಿದೆ.

ಮೂರೇ ತಿಂಗಳ ಬಳಕೆ:

ಜುಲೈ‌ನಿಂದ ಅಕ್ಟೋಬರ್ ತಿಂಗಳಲ್ಲಿ ಮಾತ್ರ ತಾಲ್ಲೂಕಿನ ಏತ ನೀರಾವರಿ ಯೋಜನೆ ಅಡಿ ನೀರನ್ನು ಕೆರೆಗಳಿಗೆ ಹರಿಸಲಾಗುತ್ತದೆ. ಮಳೆಗಾಲ ತಡವಾಗಿ ಆರಂಭಗೊಂಡರೆ ನೀರೆತ್ತುವ ಕಾರ್ಯ ಆಗುವುದಿಲ್ಲ. ಬೇಸಿಗೆಯಲ್ಲಿ ನದಿಯಲ್ಲಿ ನೀರಿಲ್ಲದ ಕಾರಣಕ್ಕೆ ನೀರೆತ್ತುವುದಿಲ್ಲ. ಮಳೆಯಿಂದಾಗಿ ಕೆರೆ ತುಂಬಿದ್ದರೆ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಈ ಎಲ್ಲ ಕಾರಣಕ್ಕೆ ನೀರೆತ್ತುವುದಕ್ಕೆ ಹೆಚ್ಚೆಂದರೆ ಅಂದಾಜು ಮೂರು ತಿಂಗಳು ವಿದ್ಯುತ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಇನ್ನುಳಿದ 9 ತಿಂಗಳು ಮೆಸ್ಕಾಂಗೆ ಕನಿಷ್ಠ ₹ 25 ಲಕ್ಷ ಶುಲ್ಕ ಪಾವತಿಸಲೇಬೇಕಾಗುತ್ತದೆ.

ರೈತರೇ ಸಂಘಟಿತರಾಗಬೇಕು:

ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಆರಂಭಗೊಂಡಿದ್ದರೂ ಬೇಸಿಗೆ ಸಂದರ್ಭಕ್ಕೆ ಕೆರೆಗಳಲ್ಲಿ ನೀರಿಲ್ಲದಿದ್ದರೆ ಪ್ರಯೋಜನವೇನು ಎಂಬ ಪ್ರಶ್ನೆ ಮೂಡುವುದು ಸಹಜ. ಕೆರೆ ತುಂಬಿದಾಗ ಅದನ್ನು ಕೃಷಿಗೆ ಬಳಸಿಕೊಳ್ಳುವ ರೈತರು ಖಾಲಿಯಾದಾಗ ಕೈಚೆಲ್ಲಿ ಕೂರುತ್ತಾರೆ. ಅಕ್ಟೋಬರ್, ಡಿಸೆಂಬರ್ ಅಂತ್ಯಕ್ಕೆ ಕೆರೆಯಲ್ಲಿ ಸಂಗ್ರಹವಾಗುವ ನೀರು ಬಳಕೆ ಮಾಡಿಕೊಳ್ಳದೇ ಇರುವುದಕ್ಕೆ ರೈತರೇ ನಿರ್ಣಯ ಕೈಗೊಳ್ಳಬೇಕು. ಕೆರೆಗಳಲ್ಲಿ ನೀರಿದ್ದಾಗ ಮಾತ್ರ ಯೋಜನೆ ಬಳಕೆಯಾಗುತ್ತದೆ. ಉಳಿದ ಸಮಯದಲ್ಲಿ ವಿದ್ಯುತ್‌ ಬಿಲ್‌ ಕಟ್ಟುವ ಬಗ್ಗೆಯೂ ಸರ್ಕಾರ ವಿನಾಯಿತಿ ನೀಡಬೇಕು. ಇಲ್ಲ ಸಮರ್ಪಕ ಅನುದಾನ ಒದಗಿಸಿದರೆ‌ ಯೋಜನೆಗಳು ಸಾಫಲ್ಯವಾಗಲು ಸಾಧ್ಯ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ ಪಿ.ವೈ. ರವಿ ಹೇಳಿದರು.

ಪುರದಕೆರೆ ಜಾಕ್‌ವೆಲ್‌ನಿಂದ ನೂರಾರು ಕೆರೆಗಳಿಗೆ ನೀರು ಹರಿದಿದೆ. ಆದರೆ ನೇರವಾಗಿ ರೈತರ ಜಮೀನಿಗೆ ನೀರು ಹರಿಸುವ ಕಸಬಾ ಏತನೀರಾವರಿ ಯೋಜನೆಯಿಂದ ಪ್ರಯೋಜನವಾಗಿಲ್ಲ. ನೀರು ಎಲ್ಲಿ ಹರಿದಿದೆ ಎನ್ನುವುದೇ ಗೊತ್ತಿಲ್ಲ
ಶಶಿಧರಸ್ವಾಮಿ ಕಣಿವೆಮನೆ
ವಿದ್ಯುತ್ ಬಿಲ್ ಬಾಕಿಯಿಂದಾಗಿ ಸಂಪರ್ಕ ಕಡಿತಗೊಂಡಿತ್ತು. ಕಳೆದ ತಿಂಗಳು ಸರ್ಕಾರ ಸ್ವಲ್ಪ ಹಣ ಪಾವತಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ
ಬಾಲರಾಜ್ ಎಇಇ ದಂಡಾವತಿ ನೀರಾವರಿ ನಿಗಮ
ಏತ ನೀರಾವರಿ ಯೋಜನೆ ವಿದ್ಯುತ್ ಬಿಲ್ ಬಾಕಿಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ರೈತರಿಗೆ ಸಮಸ್ಯೆಯಾಗುತ್ತದೆ
ಬಿ.ವೈ. ವಿಜಯೇಂದ್ರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.