ADVERTISEMENT

ಭಾವನಾತ್ಮಕ ಬೆಂಬಲಕ್ಕೆ ಕುಟುಂಬವೇ ಆಧಾರ: ಗೋಪಿನಾಥ್

ವಿತರಕರ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:45 IST
Last Updated 6 ಫೆಬ್ರುವರಿ 2026, 5:45 IST
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ವತಿಯಿಂದ ಆಯೋಜಿಸಿದ್ದ ವಿತರಕರ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ವತಿಯಿಂದ ಆಯೋಜಿಸಿದ್ದ ವಿತರಕರ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಶಿವಮೊಗ್ಗ: ‘ಕುಟುಂಬವು ನಮ್ಮ ಜೀವನಕ್ಕೆ ಭಾವನಾತ್ಮಕ ಶಕ್ತಿ ಹಾಗೂ ದೃಢವಾದ ಬೆಂಬಲ ನೀಡುತ್ತದೆ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಿತರಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿತರಕರ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಲಿಷ್ಠ ವ್ಯವಹಾರ ಸಂಪತ್ತು ನಿರ್ಮಿಸುತ್ತದೆ. ಬಲಿಷ್ಠ ಕುಟುಂಬ ಸುಂದರ ಜೀವನಕ್ಕೆ ಅಡಿಪಾಯವಾಗುತ್ತದೆ. ವ್ಯವಹಾರ ಮತ್ತು ಕುಟುಂಬದ ನಡುವೆ ಸಮತೋಲನ ಇದ್ದಾಗ ಸಂತೋಷ ಸ್ವಾಭಾವಿಕವಾಗಿ ದೊರೆಯುತ್ತದೆ. ವ್ಯವಹಾರವು ಉದ್ದೇಶ, ಗೌರವ ಹಾಗೂ ಆರ್ಥಿಕ ಭದ್ರತೆ ನೀಡಿದರೆ, ಸಂತೋಷವು ಕೇವಲ ಸಾಧನೆಗಳಲ್ಲಿ ಅಲ್ಲ, ಮನಸ್ಸಿನ ಶಾಂತಿಯಲ್ಲಿ ಅಡಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ದೇವರಾಜ ಎಂ.ಸಿ. ಮಾತನಾಡಿ, ‘ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ವಿತರಕರ ಕುಟುಂಬ ಮಿಲನ ಕಾರ್ಯಕ್ರಮವನ್ನು ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗಾಗಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಕುಟುಂಬ ಮಿಲನದಂತಹ ಕಾರ್ಯಕ್ರಮಗಳು ಸಂಘಟನೆಗಳನ್ನು ಇನ್ನಷ್ಟು ಸದೃಢಗೊಳಿಸುತ್ತವೆ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದ ಸಂಘಟನೆಗಳ ನಡುವಿನ ಕೊಂಡಿಯಾಗಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ’ ಎಂದು ಕೆಸಿಪಿಡಿಎಫ್ ಅಧ್ಯಕ್ಷ ಗಿರೀಶ್ ಸುಂಕದ ಹೇಳಿದರು.

ಲೆಕ್ಕ ಪರಿಶೋಧಕ ಗೌರೀಶ್ ಭಾರ್ಗವ್ ಕೆ.ವಿ, ಕೆಎಫ್‌ಡಬ್ಲ್ಯುಡಿಎ ಅಧ್ಯಕ್ಷ ಜಯಂತ್ ಗಾಣಿಗ್ ಮಾತನಾಡಿದರು. ವಿತರಕರ ಸಂಘದ ಗೌರವ ಕಾರ್ಯದರ್ಶಿ ಶ್ರೀನಿವಾಸ್ ಕೆ.ಎಸ್, ಉಪಾಧ್ಯಕ್ಷ ಬದರಿನಾಥ್ ಬಿ.ಆರ್, ಕಾರ್ಯದರ್ಶಿ ಗಿರೀಶ್ ಒಡೆಯರ್, ಸಹ ಕಾರ್ಯದರ್ಶಿ ಅರವಿಂದ ಎಸ್.ವಿ, ಖಜಾಂಚಿ ಚಂದ್ರಶೇಖರ್ ಕೆ.ಕೆ, ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಉಡುಗಣಿ, ಮಾಜಿ ಅಧ್ಯಕ್ಷ ಪ್ರಕಾಶ್ ಎ.ಎನ್, ನಿರ್ದೇಶಕರಾದ ಮೋಹನ್ ಕುಮಾರ್ ಕೆ.ಎಸ್, ಸುರೇಂದ್ರನಾಥ್, ಕುಮಾರ್, ರಾಘವೇಂದ್ರ, ಬಿ.ವೈ. ನವೀನ್ ಜವಳಿ, ಮಹಾರುದ್ರಪ್ಪ ಕೆ.ವಿ, ಮಹಮದ್ ಇಕ್ಬಾಲ್, ವೆಂಕಟೇಶ್ ಕೆ.ಎಂ, ಚೇತನ್ ಕುಮಾರ್ ಸೇರಿ ಸಂಘದ ಸದಸ್ಯರು ಇದ್ದರು.