
ಶಿವಮೊಗ್ಗ: ‘ನಾವೀನ್ಯತೆಯ ಆಲೋಚನೆ, ಸಾಮಾಜಿಕ ಕಳಕಳಿಯೊಂದಿಗೆ, ಉದ್ಯಮಶೀಲತೆಯನ್ನು ರೂಪಿಸಿ ನಿರ್ವಹಿಸುವ ಗುರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಮೂಡಲಿ’ ಎಂದು ಹೊಸೂರಿನ ಅಧಿಯಮಾನ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಜಿ.ರಂಗನಾಥ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ – ‘ಟೆಕ್‌ಝೋನ್ ನ್ಯಾಷನಲ್ಸ್ 2025’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಎಂಜಿನಿಯರಿಂಗ್ ಪದವಿ ತನ್ನದೇ ವಿಶೇಷತೆ ಹೊಂದಿದೆ. ಉದ್ಯೋಗ ನೀಡುವ ಸಂಸ್ಥೆಯು ಪ್ರತಿ ಎಂಜಿನಿಯರಿಂಗ್ ಪದವೀಧರರಿಂದ, ಅಂಕಗಳ ಜೊತೆಗೆ ಕೌಶಲ ನಿರೀಕ್ಷಿಸುತ್ತದೆ. ಯುವ ಸಮೂಹ ತಮ್ಮಲ್ಲಿರುವ ಕೌಶಲಗಳನ್ನು ನಿರೂಪಿಸಲು, ನಾವೀನ್ಯ ಯೋಜನೆಗಳನ್ನು ರೂಪಿಸುವತ್ತ ಗಮನ ಹರಿಸಬೇಕು. ಅಂಕಗಳೊಂದೇ ಉನ್ನತಿಕರಣದ ಮಾನದಂಡವಲ್ಲ ಎಂಬ ವಾಸ್ತವತೆ ಅರಿಯಿರಿ’ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ‘ಸಮಯ ನಮಗಿರುವ ದೊಡ್ಡ ಗುರಿ. ಇಂದು ತಂತ್ರಜ್ಞಾನ ಕ್ಷೇತ್ರ ಉದ್ಯೋಗ ಕಡಿತ ಎಂಬ ಸವಾಲುಗಳನ್ನು ಎದುರಿಸುತ್ತಿದೆ. ಸವಾಲು ಸಮಯ ಕಲಿಸುವ ಸಹಜತೆಯ ಪಾಠವಾಗಿದ್ದು, ಎದುರಿಸುವ ಅಂತಃಶಕ್ತಿ ಬೆಳೆಸಿಕೊಳ್ಳಬೇಕಿದೆ’ ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಪಿ.ನಾರಾಯಣ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ವೈ.ವಿಜಯಕುಮಾರ್, ಸಂಶೋಧನಾ ಡೀನ್ ಎಸ್.ವಿ.ಸತ್ಯನಾರಾಯಣ, ಸಂಯೋಜಕ ಈ.ಬಸವರಾಜ್, ಎಸ್.ಎಂ. ಶರತ್, ಥಸೀನ್ ಬಶೀತ್, ವೀರೇಶ್, ಶ್ವೇತಾ, ಅನಿರುದ್ದ, ಎಂ.ಕೆ.ಶ್ರೀನಿವಾಸಮೂರ್ತಿ, ಅರುಣ್ ಕುಮಾರ್, ಶಾಜಿಯಾ ಬಾನು, ರಶ್ಮೀ ವಿ, ನವೀನ್ ಎಂ.ಆರ್, ಬಿಂದಿಯ, ಎಸ್.ಪಿ.ಅಶ್ವಿನಿ ಉಪಸ್ಥಿತರಿದ್ದರು. ಇದೇ ವೇಳೆ ಕಾಲೇಜಿನ ಕ್ರಿಯಾಶೀಲ ಚಟುವಟಿಕೆಗಳನ್ನು ಒಳಗೊಂಡ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ವಿದ್ಯಾರ್ಥಿಗಳಿಂದ ನಾವೀನ್ಯತೆಯ ಮ್ಯಾರಥಾನ್
ದೇಶದ ವಿವಿಧ ಎಂನಿಯರಿಂಗ್ ಕಾಲೇಜುಗಳಿಂದ ಬಂದಿದ್ದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾವೀನ್ಯ ಆಲೋಚನೆಗಳ ಮೂಲಕ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಗಣಕ ವಿಜ್ಞಾನ ಸಿವಿಲ್ ಮೆಕ್ಯಾನಿಕಲ್ ರೋಬೊಟಿಕ್ಸ್ ಕೃತಕ ಬುದ್ದಿಮತ್ತೆಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಾದ ಪೇಪರ್ ಪ್ರೆಸೆಂಟೇಶನ್ ಅಲ್ಗೋ ಒಲಿಂಪಿಕ್ಸ್ ಎಐ ಪ್ರಾಂಪ್ಟ್ ಎಂಜಿನಿಯರಿಂಗ್ ಬಗ್ ಬೌಂಟಿ ಕೋಡಿಂಗ್ ರಿಲೇ ಆರ್‌ಸಿ ಪ್ಲೇನ್ ರೇಸ್ ರೋಬೋ ಸಾಕರ್ ಹಾರ್ಡ್‌ವೇರ್ ಹ್ಯಾಕಥಾನ್ ಲೈನ್ ಫಾಲೋವರ್ ಡೈವೆಸ್ಟ್ ಇನ್‌ವೆಸ್ಟ್ ಮಾದರಿ ಮ್ಯಾನಿಯಾ ಮೆಕ್ ಕ್ವಿಜ್ ವೆಲ್ಡ್ ವಿಜಾರ್ಡ್ಸ್ ಕೋಡ್ ಟು ಪ್ಲಾಟ್ ಕ್ಯಾಡ್ ಕ್ಲ್ಯಾಶ್ ಸರ್ವೇಯರ್ಸ್ ರೇಸ್ ಬ್ರಿಡ್ಜ್ ಮ್ಯಾನಿಯಾ ಸಿವಿಲ್ ಟಾಪ್ ಗನ್ ಮತ್ತು ಆಧುನಿಕ ಕಟ್ಟಡ ಮಾದರಿ ಪ್ರದರ್ಶನ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.