ADVERTISEMENT

ಶಿವಮೊಗ್ಗ | ಕಾಮಗಾರಿ ವಿಳಂಬವಾದರೆ ಪರವಾನಗಿ ರದ್ದು: ಸಚಿವೆ ಶೋಭಾ ಕರಂದ್ಲಾಜೆ

ಇಎಸ್‌ಐ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:50 IST
Last Updated 15 ಸೆಪ್ಟೆಂಬರ್ 2025, 5:50 IST
ಶಿವಮೊಗ್ಗ ರಾಗಿಗುಡ್ಡದಲ್ಲಿ ನಿರ್ಮಾಣ ಹಂತದಲ್ಲಿರುವ 100 ಹಾಸಿಗೆಯ ಇಎಸ್‌ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವೀಕ್ಷಿಸಿದರು
ಶಿವಮೊಗ್ಗ ರಾಗಿಗುಡ್ಡದಲ್ಲಿ ನಿರ್ಮಾಣ ಹಂತದಲ್ಲಿರುವ 100 ಹಾಸಿಗೆಯ ಇಎಸ್‌ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವೀಕ್ಷಿಸಿದರು   

ಶಿವಮೊಗ್ಗ: ‘ನಗರದ ಇಎಸ್‌ಐ ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು 2026ರ ಏಪ್ರಿಲ್ ಒಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಗುತ್ತಿಗೆ ಪಡೆದ ಕಂಪನಿಯ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಎಚ್ಚರಿಸಿದರು.

ಇಲ್ಲಿನ ರಾಗಿಗುಡ್ಡದಲ್ಲಿ ನಿರ್ಮಾಣ ಹಂತದಲ್ಲಿರುವ 100 ಹಾಸಿಗೆಯ ಇಎಸ್‌ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದರು. 

‘ಕಟ್ಟಡ ಕಾಮಗಾರಿ 2022ರಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೆ, ತಳಪಾಯದಲ್ಲಿ ಬೃಹತ್ ಗಾತ್ರದ ಕಲ್ಲುಗಳು ಸಿಕ್ಕಿದ್ದರಿಂದ ವಿಳಂಬವಾಗಿದೆ. ಈಗಾಗಲೇ ಕಲ್ಲುಗಳನ್ನು ಸ್ಫೋಟಗೊಳಿಸಲು ಪರವಾನಗಿ ಸಿಕ್ಕಿದ್ದು, ಕಾಮಗಾರಿ ನಡೆಯುತ್ತಿದೆ. ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು. 

ADVERTISEMENT

‘ಜಿಲ್ಲೆಯಲ್ಲಿ 70,000 ಇಎಸ್‌ಐ ನೋಂದಣಿ ಕಾರ್ಮಿಕರಿದ್ದು, ಸಾಕಷ್ಟು ಉದ್ಯೋಗದಾತರು ತಮ್ಮ ಕಾರ್ಮಿಕರ ಇಎಸ್‌ಐ ನೋಂದಣಿ ಮಾಡಿಸುವುದಿಲ್ಲ. ಇದರಿಂದಾಗಿ ಕಾರ್ಮಿಕರು ಸಾಮಾಜಿಕ ಭದ್ರತಾ ಸವಲತ್ತುಗಳು, ಆರೋಗ್ಯ ವಿಮೆಯಂತಹ ಸವಲತ್ತುಗಳನ್ನು ಕಳೆದುಕೊಳ್ಳುತ್ತಾರೆ. ಹೀಗೆ ವಿಮೆ ವಂಚಿತರಾದ ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಗೆ ತರಲು ವಿಶೇಷ ಯೋಜನೆ ರೂಪಿಸಲಾಗಿದೆ’ ಎಂದರು. 

‘ಆಸ್ಪತ್ರೆ ಕಟ್ಟಡ ಕಾಮಗಾರಿ ಶೇ 60ರಷ್ಟು ಪೂರ್ಣಗೊಂಡಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಕಾರ್ಮಿಕರಿಗೆ ಸೇವಾ ಸೌಲಭ್ಯ ಸಿಗುವಂತಾಗಬೇಕು’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. 

ಕಾರ್ಮಿಕರ ರಾಜ್ಯ ವಿಮಾ ಯೋಜನೆಗೆ (ಇಎಸ್‌ಐ) ನಿಗದಿಪಡಿಸಿರುವ ವೇತನ ಹೆಚ್ಚಳಗೊಳಿಸಬೇಕು. ಅದೇ ರೀತಿ, ಸ್ಥಳೀಯವಾಗಿ ಕಾರ್ಮಿಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಇಎಸ್‌ಐ ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ರಾಜಸಾಬ್ ಎಚ್.ನಂದಿಹಳ್ಳಿ ಒತ್ತಾಯಿಸಿದರು. 

ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಎಸ್.ರುದ್ರೇಗೌಡ, ಮಹೇಶ್ ಇದ್ದರು. 

‘ಕೇಂದ್ರದಡಿಯೇ ಇಎಸ್‌ಐ ಆಸ್ಪತ್ರೆ ನಡೆಯಲಿ’: ಬಿ.ವೈ.ರಾಘವೇಂದ್ರ

‘ಕೇಂದ್ರ ಸರ್ಕಾರದಡಿಯೇ ಇಎಸ್‌ಐ ಆಸ್ಪತ್ರೆ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು.. ಇದರಿಂದ ಗುಣಮಟ್ಟದ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡಲು ಸಹಕಾರಿ ಆಗಲಿದೆ. ಇಎಸ್‌ಐ ಆಸ್ಪತ್ರೆಯ ಪ್ರಾದೇಶಿಕ ಕಚೇರಿ ಹುಬ್ಬಳ್ಳಿಯಲ್ಲಿದ್ದು ಇದನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಬೇಕು. ಇದರಿಂದ ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದೆ. ಇಲ್ಲಿನ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಸಾಗರ ಮತ್ತು ಶಿಕಾರಿಪುರದಲ್ಲಿಯೂ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಭಾಗದಲ್ಲಿಯೂ ಕೂಡ ಇಎಸ್‌ಐ ಔಷಧಾಲಯ ತೆರೆಯಲು ಅವಕಾಶ ನೀಡಬೇಕು’ ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು. 

ಕಾರ್ಮಿಕ ಸಂಹಿತೆ ಸರಳೀಕರಣ

‘ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ಸರಳೀಕರಣ ಮಾಡಲು ಚಿಂತನೆ ನಡೆದಿದೆ. ಇದರಿಂದ ಅಸಂಘಟಿತ ಕಾರ್ಮಿಕರಿಗೂ ಇಎಸ್‌ಐ ಇಪಿಎಫ್ ಪಿಂಚಣಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ. ಸಾಮಾಜಿಕ ಭದ್ರತೆ ಮಹಿಳೆಯರ ಉದ್ಯೋಗಕ್ಕೆ ಉತ್ತೇಜನ ನೀಡಲಾಗುವುದು. ಇದಕ್ಕೆ ರಾಜ್ಯ ಸರ್ಕಾರದ ಸಹಕಾರವೂ ಬೇಕು. ಇತರೆ ರಾಜ್ಯಗಳೊಂದಿಗೂ ಈ ಬಗ್ಗೆ ಚರ್ಚೆ ನಡಯುತ್ತಿದೆ. ಇಲ್ಲಿ ಹಳೆಯ ಕಾರ್ಮಿಕ ಸಂಹಿತೆಗಳನ್ನು ತೆಗೆದು ಹಾಕಲಾಗುವುದು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.