
ಸಾಗರ: ಕೆಲವು ಸೈಬರ್ ಕೇಂದ್ರಗಳಲ್ಲಿ ನಕಲಿ ಕಾರ್ಮಿಕರ ಕಾರ್ಡ್ ಮಾಡಿಕೊಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಅದು ಅಪರಾಧ. ನಕಲಿ ಕಾರ್ಡ್ ಮಾಡಿಕೊಡುವವರು ಹಾಗೂ ಮಾಡಿಸಿಕೊಳ್ಳುವವರು ಇಬ್ಬರನ್ನೂ ಜೈಲಿಗೆ ಕಳಿಸಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.
ಇಲ್ಲಿನ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ, ಟೀ ಶರ್ಟ್ ವಿತರಣೆ, ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಸೌಲಭ್ಯ ನೈಜ ಕಾರ್ಮಿಕರಿಗೆ ತಲುಪಬೇಕು. ಕಾರ್ಮಿಕರಿಗೆ ವಂಚನೆಯಾಗುವುದನ್ನು ಸಹಿಸಲಾಗುವುದಿಲ್ಲ. ತಾಲ್ಲೂಕಿನಲ್ಲಿ ಕಾರ್ಮಿಕ ಸ್ನೇಹಿ ಅಧಿಕಾರಿಗಳಿಗೆ ಮಾತ್ರ ಅವಕಾಶ ಇದ್ದು, ಕಾರ್ಮಿಕರನ್ನು ಶೋಷಣೆ ಮಾಡುವ ಅಧಿಕಾರಿಗಳನ್ನು ಬೇರೆಡೆಗೆ ಕಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಸಂತೋಷ್ ಲಾಡ್ ಕಾರ್ಮಿಕ ಸಚಿವರಾದ ಮೇಲೆ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕ ಪರವಾದ ಅನೇಕ ಯೋಜನೆಗಳು ಜಾರಿಗೆ ತರಲಾಗಿದೆ. ಸಾಗರ ತಾಲ್ಲೂಕು ಒಂದರಲ್ಲೆ 10 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಇದ್ದು, ಎಲ್ಲರೂ ಸಂಘಟಿತರಾಗಿ ಹಕ್ಕುಗಳನ್ನು ಸಂಘಟನೆ ಮೂಲಕ ಪಡೆಯಿರಿ ಎಂದು ಸಲಹೆ ನೀಡಿದರು.
ಸರ್ಕಾರ ಕಾರ್ಮಿಕರಿಗೆ ನೀಡುತ್ತಿದ್ದ ವಿಮಾ ಮೊತ್ತವನ್ನು ₹ 5ರಿಂದ 8 ಲಕ್ಷಕ್ಕೆ ಏರಿಸಿದೆ. ಪ್ರತಿಯೊಬ್ಬ ಕಾರ್ಮಿಕರು ವಿಮೆ ಮಾಡಿಸಿಕೊಳ್ಳಬೇಕು. ಕುಟುಂಬಕ್ಕೆ ಆಧಾರವಾಗಿರುವ ನಿಮಗೆ ಹೆಚ್ಚು ಕಡಿಮೆಯಾದರೆ ಕುಟುಂಬ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಕಾರ್ಮಿಕರ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ರಾಮಚಂದ್ರ ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಣಪತಿ ಮಂಡಗಳಲೆ, ಲಲಿತಮ್ಮ, ಸೈಯದ್ ಜಾಕೀರ್, ರಮೇಶ್ ಕೆಳದಿಪುರ, ರಾಮಪ್ಪ, ಮೈಲಪ್ಪ, ಕೃಷ್ಣಮೂರ್ತಿ, ಹೊಸಂತೆ ಗಣಪತಿ, ಕೆರೆಯಪ್ಪ ಇನ್ನಿತರರು ಹಾಜರಿದ್ದರು. ಅನನ್ಯ ಪ್ರಾರ್ಥಿಸಿದರು. ಅಣ್ಣಪ್ಪ ಮೇಸ್ತ್ರಿ ಸ್ವಾಗತಿಸಿದರು. ಸತೀಶ್ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಹರೀಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.