ADVERTISEMENT

ಹಲವು ಪಂಚಾಯಿತಿಗಳಲ್ಲಿ ನಕಲಿ ಸಚ್ಛತಾ ಕಾರ್ಮಿಕರು: ಎಚ್.ಹಣಮಂತಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 14:35 IST
Last Updated 8 ಜೂನ್ 2021, 14:35 IST
ಎಚ್.ಹಣಮಂತಪ್ಪ
ಎಚ್.ಹಣಮಂತಪ್ಪ   

ಶಿವಮೊಗ್ಗ: ನಕಲಿ ಪ್ರಮಾಣ ಪತ್ರ ಪಡೆದು ಕೆಲವರು ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಯದ ಕೆಲಸ ಪಡೆದಿದ್ದಾರೆ. ತಾವೂ ಆ ಕೆಲಸ ಮಾಡದೇ ಬೇರೆಯವರ ಮೂಲಕ ಮಾಡಿಸುತ್ತಿದ್ದಾರೆ ಎಂದು ರಾಜ್ಯ ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹಣಮಂತಪ್ಪ ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪೌರಕಾರ್ಮಿಕರ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಇಲಾಖೆಯ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ, ನೇರ ನೇಮಕಾತಿ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಸೇವಾ ಕಾರ್ಮಿಕರನ್ನು ಕಾಯಂ ಮಾಡುವುದು ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಕಾಯಂ ಉದ್ಯೋಗಿಗಳು ಎಂದು ಪರಿಗಣಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಅನುಮತಿ ದೊರೆಯುವ ಸಾಧ್ಯತೆ ಇದೆ. ಪ್ರಸ್ತುತ ಪ್ರತಿ 750 ಜನಸಂಖ್ಯೆಗೆ ಒಬ್ಬರಂತೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಕೊರತೆ ಇರುವ ಸಂಸ್ಥೆಗಳಲ್ಲಿ ನೌಕರರ ನೇಮಕಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಗೃಹಭಾಗ್ಯ ಯೋಜನೆಯಡಿ ಪೌರಸೇವಾ ಕಾರ್ಮಿಕರಿಗೆ ವಸತಿ ಗೃಹ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅರ್ಹರಿಗೆ ಶೀಘ್ರ ವಿಲೇವಾರಿ ಮಾಡಲಾಗುವುದು ಎಂದರು.

ಪೌರಸೇವಾ ಕಾರ್ಮಿಕರ ವಿಶ್ರಾಂತಿಗಾಗಿ ಪ್ರತ್ಯೇಕ ಕೊಠಡಿ ಸ್ಥಾಪಿಸುವಂತೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಹೆಸರು ನಮೂದಿಸಿದ ಗುರುತಿನ ಚೀಟಿ ವಿತರಿಸಬೇಕು. ಇದರಿಂದ ಅರ್ಹರಲ್ಲದವರು ಪಡೆಯುತ್ತಿರುವ ಸೌಲಭ್ಯ ನಿಯಂತ್ರಿಸಬಹುದಾಗಿದೆ ಎಂದು ಸೂಚಿಸಿದರು.

ಕೊರೊನಾ ಸೋಂಕಿನ ಸಮಯದಲ್ಲಿ ಪೌರ ಸೇವಾ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಪರಿಕರಗಳನ್ನು ವಿತರಿಸಲು ಹಾಗೂ ಗುಣಮಟ್ಟದ ಆಹಾರ ಒದಗಿಸಲು ಸೂಚಿಸಲಾಗಿದೆ. ಕಾರ್ಮಿಕರು ಹಾಗೂ ಅವರ ಅವಲಂಬಿತರ ಕುಟುಂಬದ ರಕ್ಷಣೆ ಮತ್ತು ಸುರಕ್ಷತೆ ಕಾಪಾಡಲು ನಿಗಮ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ,ಒದಲ ಹಂತದಲ್ಲಿ ಶೇ 92ರಷ್ಟು ಎರಡನೇ ಹಂತದಲ್ಲಿ ಶೇ 62ರಷ್ಟು ಪೌರ ಕಾರ್ಮಿಕರಿಗೆ ಲಸಿಕೆ ಹಾಕಿಸಲಾಗಿದೆ ಎಂದು ಮಾಹಿತಿ ನೀಡಿದರು.

ಭದ್ರಾವತಿಯಲ್ಲಿ ಈಚೆಗೆ ಕೊಲೆಯಾದ ಕರ್ತವ್ಯನಿರತ ಪೌರಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ. ಅವರ ಪತ್ನಿಗೆ ಅನುಕಂಪದ ಹುದ್ದೆ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ನಿಗಮದ ವತಿಯಿಂದ ವಿವಿಧ ಯೋಜನೆಗಳ ಅಡಿ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ. ಕಳೆದ ಸಾಲಿನಲ್ಲಿ ಅರ್ಜಿಸಲ್ಲಿಸಿದ ಎಲ್ಲ ಅರ್ಜಿದಾರರಿಗೂ ₹ 1.50 ಕೋಟಿ ಸಹಾಯಧನ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಭದ್ರಾವತಿ ಡಿವೈಎಸ್‌ಪಿ. ಸಾಹಿಲ್‌ ಶುಕ್ಲಾ, ನಗರ ಯೋಜನಾಧಿಕಾರಿ ನಾಗೇಂದ್ರ ಎಫ್.ಹೊನ್ನಳ್ಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.