ADVERTISEMENT

ಯಡವಾಲ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರ ಸಾವು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 4:49 IST
Last Updated 22 ಜೂನ್ 2025, 4:49 IST
<div class="paragraphs"><p>ಚಿರಂಜೀವಿ, ಗೌತಮ್</p></div>

ಚಿರಂಜೀವಿ, ಗೌತಮ್

   

ಶಿವಮೊಗ್ಗ: ಸ್ನೇಹಿತನ ತೋಟದ ಮನೆಯಲ್ಲಿ ಪಾರ್ಟಿ ನಡೆಸಲು ತೆರಳಿದ್ದ ವೇಳೆ ತಾಲ್ಲೂಕಿನ ಯಡವಾಲದಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಶನಿವಾರ ತಡರಾತ್ರಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ.

ಯಡವಾಲ ಗ್ರಾಮದ ಕುಮಾರನಾಯ್ಜ ಅವರ ಪುತ್ರ, ಬಿ.ಕಾಂ ಓದುತ್ತಿದ್ದ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಸಾವಿಗೀಡಾದವರು.

ADVERTISEMENT

ಸ್ನೇಹಿತ ಗೌತಮ್ ಸಹೋದರಿ ಹೆರಿಗೆ ಆಗಿದ್ದು, ಚಿರಂಜೀವಿ ಸೇರಿದಂತೆ ಎಂಟು ಮಂದಿ ಶಿವಮೊಗ್ಗದ ಸೀಗೆಹಟ್ಟಿಯಿಂದ ತಾಯಿ-ಮಗುವನ್ನು ನೋಡಲು ಯಡವಾಲಕ್ಕೆ ಸಂಜೆ ಬೈಕ್ ನಲ್ಲಿ ತೆರಳಿದ್ದರು. ನಂತರ ಎಲ್ಲರೂ ಗೌತಮ್ ಅವರ ಯಡವಾಲದ ತೋಟದ ಮನೆಗೆ ತೆರಳಿ ಅಲ್ಲಿ ಪಾರ್ಟಿ ಮಾಡಲು ಮುಂದಾಗಿದ್ದರು.

ಅಲ್ಲಿಯೇ ಅಡುಗೆ ಮಾಡಿ ಪಾನಗೋಷ್ಠಿ ಕೂಡ ನಡೆಸಿದ್ದರು. ಈ ವೇಳೆ ಚಿರಂಜೀವಿ ಬಹಿರ್ದೆಸೆಗೆ ಹೋಗಲು ಮುಂದಾಗಿದ್ದು, ಆತನನ್ನು ಗೌತಮ್ ಕರೆದೊಯ್ದಿದ್ದಾನೆ. ಪಕ್ಕದಲ್ಲಿ ಗೌತಮ್ ಚಿಕ್ಕಪ್ಪನ ಜಮೀನಿನಲ್ಲಿದ್ದ ಕೃಷಿ ಹೊಂಡದಿಂದ ನೀರು ತೆಗೆದುಕೊಳ್ಳುವಾಗ ಚಿರಂಜೀವಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಗೌತಮ್ ಕೂಡ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಕುಂಸಿ ಠಾಣೆ ಪೊಲೀಸರು, ಭಾನುವಾರ ಶವಗಳನ್ನು ಕೃಷಿ ಹೊಂಡದಿಂದ ಮೇಲೆ ತೆಗೆದಿದ್ದಾರೆ. ಮೃತ ಯುವಕರ ಕುಟುಂಬದವರ ರೋದನೆ ಮುಗಿಲುಮುಟ್ಟಿತ್ತು. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.