
ಸೊರಬ ತಾಲ್ಲೂಕಿನ ಬೈರೆಕೊಪ್ಪ ಗ್ರಾಮದಲ್ಲಿ ರಾಶಿ ಹಾಕಿರುವ ಶುಂಠಿ
ಸೊರಬ: ಇದೀಗ ಶುಂಠಿ ದರ ಏರಿಕೆಯಾಗಿದೆ. ಇದು ಬೆಳೆಗಾರರಲ್ಲಿ ಸಮಾಧಾನ ತಂದಿದ್ದರೂ, ಎಲೆಚುಕ್ಕಿ ರೋಗ ಮತ್ತು ಕೊಳೆ ರೋಗದಿಂದ ಬೆಳೆ ಹಾಳಾಗುತ್ತಿರುವುದು ಆತಂಕ ಮೂಡಿಸಿದೆ. ತಾಲ್ಲೂಕಿನಲ್ಲಿ ರೋಗಬಾಧೆಯಿಂದ ಶೇ 50ರಷ್ಟು ಇಳುವರಿ ಕುಂಠಿತವಾಗಿದೆ.
ತಾಲ್ಲೂಕಿನ ಅಂದಾಜು 871.37 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿದೆ. ಇದರ ಕಟಾವು ಕಾರ್ಯ ಭರದಿಂದ ಸಾಗಬೇಕಿತ್ತು. ಆದರೆ, ಗದ್ದೆಗೆ ಇಳಿದ ರೈತರಿಗೆ ನಿರಾಸೆ ಉಂಟಾಗಿದೆ. ಭೂಮಿಯಿಂದ ಗಡ್ಡೆಗಳನ್ನು ಹೊರತೆಗೆಯುತ್ತಿದ್ದಂತೆಯೇ ಆಘಾತಕ್ಕೊಳಗಾಗುತ್ತಿದ್ದಾರೆ. ಮೇಲ್ನೋಟಕ್ಕೆ ಆರೋಗ್ಯಯುತವಾಗಿ ಕಂಡ ಗಿಡಗಳ ಕೆಳಗೆ ಗಡ್ಡೆಗಳು ಕೊಳೆತು ಹೋಗಿವೆ. ಹಲವು ಕಡೆ ಗಡ್ಡೆಗಳು ಬಲಿತೇ ಇಲ್ಲ. ಇದು ಬೆಳೆಗಾರರ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿಗೊಳಿಸಿದೆ.
‘ಈ ಬಾರಿ ಕಟಾವಿನ ಹಂತದಲ್ಲಿ ಇಳುವರಿ ಅರ್ಧದಷ್ಟು ಕುಂಠಿತಗೊಂಡಿದೆ. ಕಳೆದ ವರ್ಷ ಪ್ರತಿ ಎಕರೆಗೆ ಸರಾಸರಿ 150ರಿಂದ 180 ಚೀಲ ಇಳುವರಿ ಪಡೆದಿದ್ದೆವು. ಈ ಬಾರಿ 70ರಿಂದ 90 ಚೀಲ ಇಳುವರಿಯಷ್ಟೇ ಸಿಕ್ಕಿದೆ. ಎಲೆಚುಕ್ಕಿ ರೋಗ ಬಾಧೆ ನಿಯಂತ್ರಣಕ್ಕೆ ಅತಿಯಾದ ಔಷಧಿ ಸಿಂಪಡಣೆ ಮಾಡಿದ್ದು ಮಾರಕವಾಗಿ ಪರಿಣಮಿಸಿದೆ. ಜತೆಗೆ ಗಡ್ಡೆಯು ಕೊಳೆ ರೋಗದಿಂದಾಗಿ ಮಣ್ಣಿನಲ್ಲೇ ಕರಗಿ ಹೋಗಿದೆ. ಇದರಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ’ ಎನ್ನುತ್ತಾರೆ ಶುಂಠಿ ಬೆಳೆಗಾರ ಶಿವಕುಮಾರ್ ಯಲವಳ್ಳಿ.
‘ಕಟಾವು ಮಾಡಿದ ಅಲ್ಪಸ್ವಲ್ಪ ಶುಂಠಿಯೂ ಗುಣಮಟ್ಟದಿಂದ ಕೂಡಿಲ್ಲ. ಬೀಜದ ಶುಂಠಿಗೆ ಬೇಡಿಕೆ ಹೆಚ್ಚಿದ್ದರೂ ರೋಗ ಬಾಧೆಯಿಂದ ಯಾರು ಕೊಳ್ಳುವವರಿಲ್ಲ. ಗಡ್ಡೆಗಳಲ್ಲಿ ತಿರುಳು ಇಲ್ಲದೆ ಪೊಳ್ಳಾಗುತ್ತಿರುವುದು ಮತ್ತು ರೋಗದ ಬಾಧೆಯಿಂದಾಗಿ ಗಡ್ಡೆಗಳು ಸಪ್ಪೆ ಇರುವುದು, ತೂಕದಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದೆ’ ಎನ್ನುತ್ತಾರೆ ಅವರು.
‘ಮಾರುಕಟ್ಟೆಯಲ್ಲಿ ಈಗ ಕ್ವಿಂಟಲ್ ಹಸಿ ಶುಂಠಿಗೆ ₹6,000 ಧಾರಣೆ ಇದೆ. ಕಳೆದ ವರ್ಷ ಈ ಸಮಯದಲ್ಲಿ ದರ ₹ 5,000 ಇತ್ತು. ಈಗ ಮಾರಾಟ ಮಾಡಲು ನಮ್ಮ ಬಳಿ ಉತ್ಪನ್ನವೇ ಇಲ್ಲದಂತಾಗಿದೆ. ಕಟಾವು ಮಾಡಿದ ಮೇಲೆ ಸಿಗುತ್ತಿರುವ ಇಳುವರಿ ನೋಡಿದರೆ ಕಟಾವು ಮಾಡಲು ತಗಲುವ ಕೂಲಿಯ ವೆಚ್ಚವೂ ಸಿಗದಂತಾಗಿದೆ’ ಎಂದು ರೈತರು ಹತಾಶೆ ವ್ಯಕ್ತಪಡಿಸಿದ್ದಾರೆ.
ಅತಿಯಾದ ಮಳೆಯಿಂದಾಗಿ ಎಲೆಚುಕ್ಕಿ ರೋಗ ಬಾಧೆಯು ಪತ್ರಹರಿತ್ತಿನ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಶುಂಠಿ ಇಳುವರಿ ಕುಂಠಿತವಾಗಿದೆ. ಗುಣಮಟ್ಟವೂ ಇಳಿಕೆಯಾಗಿದೆ. ರೈತರು ಗದ್ದೆಯ ಫಲವತ್ತತೆ ಆಧಾರದ ಮೇಲೆ ಬೀಜೋಪಾಚಾರ ಮಾಡಬೇಕಿದೆವೆಂಕಟೇಶ್, ತೋಟಗಾರಿಕಾ ಇಲಾಖೆ ಅಧಿಕಾರಿ
ಸಮೀಕ್ಷೆ ನಡೆಸಿ ಪರಿಹಾರ ನೀಡಿ..
‘ಸೊರಬ ಭಾಗದ ಶುಂಠಿ ಬೆಳೆಗಾರರು ಸಂಕಷ್ಟದ ಸುಳಿಯಲ್ಲಿದ್ದಾರೆ. ಕಟಾವಿನಂತಹ ನಿರ್ಣಾಯಕ ಸಮಯದಲ್ಲಿ ರೈತರು ಎದುರಿಸುತ್ತಿರುವ ಆಘಾತವನ್ನು ಪರಿಗಣಿಸಿ ತೋಟಗಾರಿಕಾ ಇಲಾಖೆ ತಕ್ಷಣವೇ ಇಳುವರಿ ಕುಸಿತದ ಸಮೀಕ್ಷೆ ನಡೆಸಬೇಕು. ಶೇ 50ರಷ್ಟು ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪರಿಹಾರ ವಿತರಿಸಬೇಕು. ಮುಂದಿನ ಹಂಗಾಮಿಗೆ ನೆರವಾಗಲು ಬೀಜೋಪಚಾರ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಉಮೇಶ್ ಎನ್. ಪಾಟೀಲ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.