ADVERTISEMENT

ಮಲೆನಾಡಿನ ಮಣ್ಣಿನಲ್ಲಿ ಲೀನವಾದ ನಾ.ಡಿಸೋಜ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 19:33 IST
Last Updated 7 ಜನವರಿ 2025, 19:33 IST
ಸಾಗರದಲ್ಲಿ ಸಾಹಿತಿ ನಾ.ಡಿಸೋಜ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು
ಸಾಗರದಲ್ಲಿ ಸಾಹಿತಿ ನಾ.ಡಿಸೋಜ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು   

ಸಾಗರ: ಮಲೆನಾಡಿನ ‘ಮಣ್ಣಿನ ವಾಸನೆ’ ಹಿಡಿದ ಬರಹಗಾರ ಎಂದೇ ಚಿರಪರಿಚಿತರಾಗಿದ್ದ ನಾಡಿನ ಹಿರಿಯ ಸಾಹಿತಿ ನಾ.ಡಿಸೋಜ ಅವರ ಅಂತ್ಯಕ್ರಿಯೆ ಇಲ್ಲಿನ ಸಂತ ಜೋಸೆಫರ ದೇವಾಲಯದ ಪಕ್ಕದಲ್ಲಿರುವ ಸಮಾಧಿ ಸ್ಥಳದಲ್ಲಿ ಮಂಗಳವಾರ ಸಂಜೆ ನಡೆಯಿತು.

ಧರ್ಮಗುರು ಫಾದರ್ ಫೆಲಿಕ್ಸ್ ಜೋಸೆಫ್ ನರೋನಾ, ಸಹಾಯಕ ಧರ್ಮಗುರು ವಿನುತ್, ಕಿರಣ್ ಲೀಮಾ ಕ್ಯಾಥೊಲಿಕ್ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿಧಿವಿಧಾನ ಪೂರೈಸಿದರು. ಡಿಸೋಜ ಅವರ ಪತ್ನಿ ಫಿಲೊಮಿನಾ, ಪುತ್ರರಾದ ನವೀನ್, ಸಂತೋಷ್, ಪುತ್ರಿ ಶೋಭಾ ಮತ್ತಿತರರು ಹಾಜರಿದ್ದರು.

ಬೆಳಿಗ್ಗೆ ಡಿಸೋಜ ಅವರ ಪಾರ್ಥಿವ ಶರೀರದ ಮೆರವಣಿಗೆ ತೆರೆದ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು ಮೆರವಣಿಗೆ ವೀಕ್ಷಿಸಿ ಅಂತಿಮ ನಮನ ಸಲ್ಲಿಸಿದರು. ನಂತರ ಗಾಂಧಿ ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

ತಾಲ್ಲೂಕು ಆಡಳಿತದ ವತಿಯಿಂದ ಕುಶಾಲತೋಪು ಹಾರಿಸುವ ಮೂಲಕ ಡಿಸೋಜ ಅವರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಶಾಸಕ ಗೋಪಾಲಕೃಷ್ಣ ಬೇಳೂರು, ಉಪವಿಭಾಗಾಧಿಕಾರಿ ಯತೀಶ್ ಆರ್., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ ಉಪಸ್ಥಿತರಿದ್ದರು.

ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ರಂಗಕರ್ಮಿಗಳಾದ ಚಿದಂಬರರಾವ್ ಜಂಬೆ, ಕೆ.ವಿ.ಅಕ್ಷರ, ಕೆ.ಜಿ.ಕೃಷ್ಣಮೂರ್ತಿ, ಇಕ್ಬಾಲ್ ಅಹ್ಮದ್, ಕುಪ್ಪಳಿಯ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಡಿಸೋಜ ಅವರ ಅಂತಿಮ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.