ADVERTISEMENT

ಶಿವಮೊಗ್ಗ: ಮೊಹಶೀರ್ - ಪಂಟಿಯಾಸ್‌ ಮೀನು ತಳಿ ಉಳಿಸಲು ತುಂಗೆಗೆ ಕಾವಲು

ಜನಜಾಗೃತಿಗೆ ಹಿತರಕ್ಷಣಾ ಸಮಿತಿಗೆ ಮೀನುಗಾರಿಕೆ ಇಲಾಖೆ ಮೊರೆ

ವೆಂಕಟೇಶ ಜಿ.ಎಚ್.
Published 2 ಮಾರ್ಚ್ 2024, 6:20 IST
Last Updated 2 ಮಾರ್ಚ್ 2024, 6:20 IST
ಮೊಹಶೀರ್ ಪ್ರಬೇಧದ ಮೀನುಗಳು (ಪ್ರಜಾವಾಣಿ ಸಂಗ್ರಹ ಚಿತ್ರ)
ಮೊಹಶೀರ್ ಪ್ರಬೇಧದ ಮೀನುಗಳು (ಪ್ರಜಾವಾಣಿ ಸಂಗ್ರಹ ಚಿತ್ರ)   

ಶಿವಮೊಗ್ಗ: ತೀರ್ಥಹಳ್ಳಿಯ ಸಿಬ್ಬಲಗುಡ್ಡೆಯ ಮತ್ಸ್ಯಧಾಮದಲ್ಲಿನ ಮೀನುಗಳ ರಕ್ಷಣೆಗೆ ಬೇಸಿಗೆಯಲ್ಲಿ ತುಂಗೆಯ ಒಡಲು ಬರಿದಾಗದಂತೆ ಮೀನುಗಾರಿಕೆ ಇಲಾಖೆ ನೋಡಿಕೊಳ್ಳಬೇಕಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಅಲ್ಲಿನ ಮೀನುಗಾರಿಕೆ ಹಿತರಕ್ಷಣಾ ಸಮಿತಿಯ ಮೊರೆ ಹೋಗಿದೆ.

ಮತ್ಸ್ಯಧಾಮದಲ್ಲಿನ ಮೊಹಶೀರ್ ಹಾಗೂ ಪಂಟಿಯಾಸ್‌ ತಳಿಯ ಮೀನುಗಳ ಭವಿಷ್ಯ ತುಂಗೆಯ ಒಡಲ ಪಸೆ ಆಧರಿಸಿದೆ. ಮಲೆನಾಡಿನಲ್ಲಿ ಬೇಸಿಗೆ ಬಿಸಿಲು ಹೆಚ್ಚುತ್ತಿರುತ್ತಿರುವುದು ಮೀನುಗಾರಿಕೆ ಇಲಾಖೆ ಸಿಬ್ಬಂದಿಯ ನಿದ್ರೆಗೆಡಿಸಿದೆ.

ತುಂಗಾ ನದಿ ದಡದ ಆಸುಪಾಸಿನಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಏಲಕ್ಕಿ ಸೇರಿದಂತೆ ತೋಟದ ಬೆಳೆಗಳು ವಿಸ್ತಾರಗೊಂಡಿವೆ. ತೋಟದ ನೀರಿನ ಅಗತ್ಯತೆಗೆ ಸ್ಥಳೀಯರು ನದಿಯ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ತುಂಗೆಯ ಒಡಲಲ್ಲಿ ಸಾವಿರಾರು ಪಂಪ್‌ಸೆಟ್‌ಗಳು ಕಾಣಸಿಗುತ್ತವೆ.

ADVERTISEMENT

‘ಮಳೆ ಚೆನ್ನಾಗಿ ಸುರಿದು, ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರೆ ಏನೂ ಸಮಸ್ಯೆ ಇಲ್ಲ. ಆದರೆ, ಈ ಬಾರಿ ಬರಗಾಲ ಇರುವುದರಿಂದ ನದಿಯಲ್ಲಿ ವಾಡಿಕೆಯಷ್ಟು ನೀರಿನ ಹರಿವು ಇಲ್ಲ. ಏಪ್ರಿಲ್ 15ರ ನಂತರ ನದಿ ಬರಿದಾಗಿ ಮತ್ಸ್ಯಧಾಮಕ್ಕೆ ಸಂಕಷ್ಟ ಎದುರಾಗಬಹುದು‘ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

‘ದೇವರ ಮೀನುಗಳ ಸಂರಕ್ಷಣೆ ನಿಮ್ಮದೂ ಹೊಣೆ. ಹೀಗಾಗಿ ನದಿಯಿಂದ ನೀರು ಒಯ್ಯುವುದು ಇಲ್ಲವೇ ಮೋಟಾರು ಇಡುವುದು ತಪ್ಪಿಸಲು ತೋಟಗಳಿಗೆ ಕೊಳವೆಬಾವಿ, ಹಳ್ಳ–ತೊರೆಗಳಿಂದ ಪರ್ಯಾಯ ನೀರಿನ ಮೂಲ ಕಲ್ಪಿಸಿಕೊಳ್ಳಿ’  ಎಂದು ಸ್ಥಳೀಯರಿಗೆ ಮನವರಿಕೆ ಮಾಡಲು ಮೀನುಗಾರಿಕೆ ಹಿತರಕ್ಷಣಾ ಸಮಿತಿ ಕೆಲಸ ಮಾಡಲಿದೆ.

‘ನದಿ ಪಾತ್ರದ ಗ್ರಾಮ ಪಂಚಾಯ್ತಿಗಳಲ್ಲೂ ಜಾಗೃತಿ ಮೂಡಿಸಲು ಈಗಾಗಲೇ ಮಾತುಕತೆ ನಡೆಸಿದ್ದೇವೆ. ನೀರಿನ ರಕ್ಷಣೆಗೆ ಕೈ ಜೋಡಿಸುವಂತೆ ಜಲಸಂಪನ್ಮೂಲ ಇಲಾಖೆಗೂ ಮನವಿ ಮಾಡಿದ್ದೇವೆ’ ಎಂದು ಶಿವಮೊಗ್ಗದ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಹೇಳುತ್ತಾರೆ.

‘ಹೊಸಳ್ಳಿ ಬಳಿ ತುಂಗೆಯಲ್ಲಿ ನೀರು ಕಡಿಮೆ ಆಗುವುದಿಲ್ಲ. ಆದರೆ ಸಿಬ್ಬಲಗುಡ್ಡೆಯಲ್ಲಿ ಸಮಸ್ಯೆ ಆಗುತ್ತಿದೆ. ಮೀನುಗಳ ಉಳಿವಿಗೆ ಮತ್ಸ್ಯಧಾಮದ ವ್ಯಾಪ್ತಿಯ ನದಿಯಲ್ಲಿ 5ರಿಂದ 6 ಅಡಿ ನೀರು ಇರಬೇಕು. ಈ ರೀತಿಯ ಪರಿಸ್ಥಿತಿ ಹಿಂದೆಂದೂ ಇರಲಿಲ್ಲ. ಕಳೆದ ವರ್ಷದಿಂದ ಆಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ತೀರ್ಥಹಳ್ಳಿಯ ಸಿಬ್ಬಲಗುಡ್ಡೆಯ ವಿನಾಯಕ ದೇವಸ್ಥಾನ ಬಳಿಯ ತುಂಗಾ ನದಿಯಲ್ಲಿನ ಮತ್ಸ್ಯಧಾಮದ ನೋಟ

ಏನಿದು ಮತ್ಸ್ಯಧಾಮ..

ಕಾವೇರಿ ಹಾಗೂ ತುಂಗೆಯ ಜಲಾನಯನ ಪ್ರದೇಶದಲ್ಲಿ ಕಾಣಸಿಗುವ ಅಳಿವಿನಂಚಿನ ಮೊಹಶೀರ್ ಹೆಸರಿನ ವಿಶಿಷ್ಟ ತಳಿಯ ಮೀನನ್ನು ಸಂರಕ್ಷಿಸಲು ಸರ್ಕಾರ ಮುಂದಾಗಿದೆ. ತುಂಗಾ ನದಿಯ ಶೃಂಗೇರಿ ತೀರ್ಥಹಳ್ಳಿ ತಾಲ್ಲೂಕಿನ ಸಿಬ್ಬಲಗುಡ್ಡೆ ಹಾಗೂ ಶಿವಮೊಗ್ಗ ಬಳಿಯ ಹೊಸಳ್ಳಿಯಲ್ಲಿ ಮೊಹಶೀರ್ ಮೀನುಗಳು ಹೆಚ್ಚಾಗಿ ಕಾಣಸಿಗುವ ಪ್ರದೇಶವನ್ನು ಸಂರಕ್ಷಿತ ಪ್ರದೇಶ (ಮತ್ಸ್ಯಧಾಮ) ಎಂದು ಘೋಷಿಸಲಾಗಿದೆ. ಅದರ ವ್ಯಾಪ್ತಿಯ 1.5 ಕಿ.ಮೀ ದೂರ ಮೀನುಗಾರಿಕೆ ಬೇಟೆಯನ್ನು ನಿಷೇಧಿಸಲಾಗಿದೆ. ತೀರ್ಥಹಳ್ಳಿಯಿಂದ ಹೆದ್ದೂರು ಕಟ್ಟೆಹಕ್ಕಲು ಮಾರ್ಗದಲ್ಲಿ 10 ಕಿ.ಮೀ ದೂರ ಕ್ರಮಿಸಿದರೆ ಸಿಬ್ಬಲಗುಡ್ಡೆ ಸಿಗುತ್ತದೆ. ಅಳಿವಿನಂಚಿನಲ್ಲಿರುವ ಮೊಹಶೀರ್ ಪಂಟಯಾಸ್ ಮೀನುಗಳ ವಾಸಸ್ಥಾನ ಈ ಪ್ರದೇಶ. ಸುಮಾರು 27ಕ್ಕೂ ಅಧಿಕ ಸಂಖ್ಯೆಯ ಮೀನಿನ ಪ್ರಬೇಧ ಇಲ್ಲಿದೆ. ಭಾರತೀಯ ನೈಸರ್ಗಿಕ ಸಮೀಕ್ಷೆ ಮೀನುಗಳ ಸಂತತಿಯ ರಾಷ್ಟ್ರೀಯ ಘಟಕ ತನ್ನ ಸಂಶೋಧನೆಯಲ್ಲಿ ಮೊಹಶೀರ್ ಪೆಂಟಯಸ್ ತಳಿಯ ಮೀನು ಪ್ರಬೇಧ ಅಳಿವಿನ ಅಂಚಿನಲ್ಲಿದೆ ಎಂದು ಗುರುತಿಸಿದೆ.

ಮನುಷ್ಯ ಸ್ನೇಹಿ ಈ ಮೊಹಶೀರ್..

ಮೊಹಶೀರ್ ತಳಿಯ ಈ ಮೀನುಗಳು ಒಂದಷ್ಟು ಮನುಷ್ಯ ಸ್ನೇಹಿ. ಗುಂಪು ಗುಂಪಾಗಿ ವಾಸಿಸುತ್ತವೆ. ನಿರ್ದಿಷ್ಟ ಪರಿಸರ ಬಿಟ್ಟು ದೂರ ಹೋಗುವುದಿಲ್ಲ. ಪ್ರವಾಹದ ಸಂದರ್ಭದಲ್ಲಿ ಮಾತ್ರ ತಮ್ಮ ವ್ಯಾಪ್ತಿ ಮೀರಿ ಕೆಲವು ಮೀನುಗಳು ಮುಂದೆ ಹೋಗುತ್ತವೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಹೇಳುತ್ತಾರೆ. ಬಹುತೇಕ ದೇವಸ್ಥಾನಗಳ ಸಮೀಪದಲ್ಲಿ ಮತ್ಸ್ಯಧಾಮಗಳನ್ನು ಗುರುತಿಸಲಾಗಿದೆ. ಭಕ್ತರು ನೀರಿಗೆ ಮಂಡಕ್ಕಿ ಅಕ್ಕಿ ಸೇರಿದಂತೆ ಆಹಾರ ಹಾಕುವುದರಿಂದ ಹೆಚ್ಚಾಗಿ ಅಲ್ಲಿಯೇ ನೆಲೆ ನಿಂತಿರುತ್ತವೆ. ದೇವರ ಮೀನುಗಳು ಎಂದು ನಂಬುವ ಭಕ್ತರು ಹರಕೆಯ ರೂಪದಲ್ಲೂ ಆಹಾರ ಹಾಕುತ್ತಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.